ಚಿತ್ತಾಪುರ: ‘ನಿರಂತರ ಮಳೆಯಿಂದಾಗಿ ಕೊಟ್ಟಿಗೆಯ ಮಾಳಿಗೆ ಕುಸಿದು 18 ಮೇಕೆಗಳು ಮೃತಪಟ್ಟಿದ್ದು, ಕುರಿಗಾಹಿ ಮಾಳಪ್ಪಾ ಧೂಳಪ್ಪಾ ಪೂಜಾರಿ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರಧನ ನೀಡಲಾಗುವುದು’ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿಯ ಜಿಲ್ಲಾ ಉಪನಿರ್ದೇಶಕ ರವೀಂದ್ರ ಜಿ., ಪಶುಪಾಲನಾ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಶಂಕರ ಕಣ್ಣಿ ಹಾಗೂ ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯೊಂದಿಗೆ ಭಂಕಲಗಾ ಗ್ರಾಮಕ್ಕೆ ಭೇಟಿ ನೀಡಿದರು. ಕೊಟ್ಟಿಗೆ ಮಾಳಿಗೆ ಕುಸಿದು ಮೇಕೆಗಳು ಮೃತಪಟ್ಟ ಸ್ಥಳ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿದರು.
‘ಪಶು ವೈದ್ಯರು ಜೀವಂತ ಉಳಿದಿರುವ ಮೇಕೆಗಳಿಗೆ ಚಿಕಿತ್ಸೆ ನೀಡಿದ್ದಾರೆ. ಮೃತಪಟ್ಟ ಮೇಕೆಗಳ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಎಫ್ಐಆರ್ ಪ್ರತಿ ಬಂದ ನಂತರ ಸಂತ್ರಸ್ತ ಕುರಿಗಾಹಿ ಕುಟುಂಬಕ್ಕೆ ಪ್ರಕೃತಿ ವಿಕೋಪ ಯೋಜನೆಯಡಿ ಪ್ರತಿ ಮೇಕೆಗೆ ₹4 ಸಾವಿರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.
‘ಕೊಟ್ಟಿಗೆಯಲ್ಲಿ ಒಟ್ಟು 34 ಮೇಕೆಗಳಿದ್ದವು. 18 ಮೇಕೆ ಮೃತಪಟ್ಟಿದ್ದು, 16 ಬದುಕುಳಿದಿವೆ. ಪಕ್ಕದ ಸ್ಥಳದಲ್ಲಿ 20 ಮೇಕೆ ಮರಿಗಳಿದ್ದು ಸುರಕ್ಷಿತವಾಗಿವೆ. ಮೇಕೆಗಳ ಸಾವಿನ ಕುರಿತು ಪರಿಹಾರಕ್ಕಾಗಿ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಲಾಗುವುದು’ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಂಕರ ಕಣ್ಣಿ ತಿಳಿಸಿದ್ದಾರೆ.
‘ಪಶುಪಾಲನಾ ಇಲಾಖೆಯ ಅನುಗ್ರಹ ಯೋಜನೆಯಡಿ ಮೃತಪಟ್ಟ ಪ್ರತಿ ಮೇಕೆಗೆ ₹7,500 ಪರಿಹಾರ ನೀಡಬಹುದು. ಆದರೆ, ಸರ್ಕಾರದ ಆದೇಶದ ಪ್ರಕಾರ ಕಂದಾಯ ಇಲಾಖೆಯು ಪ್ರಕೃತಿ ವಿಕೋಪದಡಿ ಪ್ರತಿ ಮೇಕೆಗೆ ನೀಡುವ ₹4,000 ಪರಿಹಾರ ಹೊರತುಪಡಿಸಿ, ವ್ಯತ್ಯಾಸದ ಪರಿಹಾರ ಧನ ₹3,500 ನೀಡಲಾಗುವುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.