ADVERTISEMENT

‘ಯೋಗ, ಧ್ಯಾನದಿಂದ ಉತ್ತಮ ಆರೋಗ್ಯ’

ಕೇಂದ್ರ ಕಾರಾಗೃಹದಲ್ಲಿ ಕೌಶಲ ಅಭಿವೃದ್ಧಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 13:21 IST
Last Updated 2 ಡಿಸೆಂಬರ್ 2021, 13:21 IST
ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಏರ್ಪಡಿಸಿದ್ದ ಕೌಶಲ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಸುಬ್ರಮಣ್ಯ ಉದ್ಘಾಟಿಸಿದರು
ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಏರ್ಪಡಿಸಿದ್ದ ಕೌಶಲ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಸುಬ್ರಮಣ್ಯ ಉದ್ಘಾಟಿಸಿದರು   

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಯೋಗ, ಧ್ಯಾನ ಶಿಬಿರ, ಬಂದಿಗಳಿಗೆ ಕೌಶಲ ಅಭಿವೃದ್ಧಿ ಕಾರ್ಯಕ್ರಮ ಬುಧವಾರ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರ್ಟ್ ಆಫ್ ಲಿವಿಂಗ್, ಜಿಲ್ಲಾ ಕೌಶಲ ಅಭಿವೃದ್ಧಿ ಮಿಷನ್‌ ಹಾಗೂ ಕೇಂದ್ರ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಸುಬ್ರಮಣ್ಯ ಮಾತನಾಡಿ, ಪ್ರತಿಯೊಬ್ಬರೂ ಯೋಗ ಮಾಡುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಹೇಳಿದರು.

ADVERTISEMENT

ಕೇಂದ್ರ ಕಾರಾಗೃಹದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಿರಂತರ ಕಲಿಕೆ, ಸ್ವಾವಲಂಬಿ ಬದುಕಿಗೆ ಕೌಶಲ ಅಭಿವೃದ್ಧಿ ಮಿಷನ್ ವತಿಯಿಂದ ತರಬೇತಿ, ಯೋಗ ಮತ್ತು ಧ್ಯಾನ ಶಿಬಿರ, ನೂತನ ಕೃಷಿ ಚಟುವಟಿಕೆಗಳ ಪ್ರಯೋಗ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕೌಶಲ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸಾತಯ್ಯ ಹಿರೇಮಠ ಮಾತನಾಡಿ, ಬಂದಿಗಳು ತರಬೇತಿಯ ಸದುಪಯೋಗ ಪಡೆದುಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳಿದರು.

ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ ಮಾತನಾಡಿ, ಅನಕ್ಷರಸ್ಥ ಬಂದಿಗಳಿಗೆ ಶಿಕ್ಷಣ, ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ ವೃತ್ತಿ ತರಬೇತಿ, ವ್ಯವಸಾಯದಲ್ಲಿ ಆಸಕ್ತಿ ಇರುವವರಿಗೆ ನೂತನ ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಸಂಗೀತದಲ್ಲಿ ಆಸಕ್ತಿ ಇರುವವರಿಗೆ ಪ್ರತಿ ದಿನ ಸಂಗೀತ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಎಲ್‌.ವಿ.ಕುಲಕರ್ಣಿ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಸುಶಾಂತ ಎಂ.ಚೌಗಲೆ, ಡಾ.ಬಸವರಾಜ ಕಿರಣಗಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗ ಶಿಕ್ಷಕರಾದ ಕಿಶೋರ, ಅಶ್ವಿನಿ, ಕೌಶಲ ಅಭಿವೃದ್ಧಿ ಇಲಾಖೆಯ ಮೌನೇಶ ಪೊದ್ದಾರ, ಕೇಂದ್ರ ಕಾರಾಗೃಹದ ಸಹ ಆಡಳಿತಾಧಿಕಾರಿ ಅಮೃತಕುಮಾರಿ ಇದ್ದರು.

ವಿ.ಕೃಷ್ಣಮೂರ್ತಿ ಸ್ವಾಗತಿಸಿದರು. ನಾಗರಾಜ ಮೂಲಗೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.