ADVERTISEMENT

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸರ್ಕಾರಿ ಶಾಲೆ ಶಿಕ್ಷಕ ಅಮಾನತು

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:10 IST
Last Updated 27 ಜೂನ್ 2025, 16:10 IST

ಕಲಬುರಗಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಕಲಬುರಗಿ ತಾಲ್ಲೂಕಿನ ‌ಸರ್ಕಾರಿ ಪ್ರೌಢಶಾಲೆಯೊಂದರ ಇಂಗ್ಲಿಷ್ ಭಾಷಾ ಶಿಕ್ಷಕ ಬಸವರಾಜ ದ್ಯಾಮಾ ಅವರನ್ನು ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೂರ್ಯಕಾಂತ ಮದಾನೆ ಶುಕ್ರವಾರ ಆದೇಶಿಸಿದ್ದಾರೆ.

ಶಿಕ್ಷಕ ಬಸವರಾಜ ದ್ಯಾಮಾ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಹಾಗೂ ಹಳೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ತನಿಖೆಗೆ ಬಿಇಒ ಶಿವಗುಂಡಪ್ಪ ಸಿದ್ಧಣಗೋಳ ನೇತೃತ್ವದಲ್ಲಿ ಸದಸ್ಯರ ಸಮಿತಿ ರಚಿಸಲಾಗಿತ್ತು. ವಿಚಾರಣಾ ಸಮಿತಿಯು ಶಾಲೆಗೆ ಭೇಟಿ ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದಿತ್ತು. ಜೊತೆಗೆ ಆರೋಪ ಎದುರಿಸುತ್ತಿರುವ ಶಿಕ್ಷಕನಿಗೆ ನೋಟಿಸ್‌ ಕೊಟ್ಟು ಉತ್ತರ ಪಡೆಯಲಾಗಿತ್ತು.

‘ಶಿಕ್ಷಕ ಬಸವರಾಜ ದ್ಯಾಮಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಮೂಲಕ ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ವಿಚಾರಣೆ ಕಾಯ್ದಿರಿಸಿ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ’ ಎಂದು ಕಲಬುರಗಿ ಡಿಡಿಪಿಐ ಸೂರ್ಯಕಾಂತ ಮದಾನೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.