ADVERTISEMENT

ಕಲಬುರಗಿ: ಗ್ರಾ.ಪಂನಿಂದಲೇ ಅಂಗನವಾಡಿಗೆ ಶುದ್ಧ ನೀರು: ಭಂವರ್ ಸಿಂಗ್ ಮೀನಾ

ಕೊಡಲಹಂಗರಗಾ, ಅಳಂಗಾ, ತಡೋಳಾ, ರುದ್ರವಾಡಿ, ನಿಂಬರ್ಗಾ ಗ್ರಾಮಗಳಿಗೆ ಸಿಇಒ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 6:11 IST
Last Updated 29 ಡಿಸೆಂಬರ್ 2023, 6:11 IST
ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರು ಅಳಂಗಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾ.ಪಂ. ಇಒ ಮಾನಪ್ಪ ಕಟ್ಟಿಮನಿ ಹಾಗೂ ಇತರ ಅಧಿಕಾರಿಗಳು ಇದ್ದರು
ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರು ಅಳಂಗಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾ.ಪಂ. ಇಒ ಮಾನಪ್ಪ ಕಟ್ಟಿಮನಿ ಹಾಗೂ ಇತರ ಅಧಿಕಾರಿಗಳು ಇದ್ದರು   

ಕಲಬುರಗಿ: ಗ್ರಾಮ ಪಂಚಾಯಿತಿಗಳ ವತಿಯಿಂದಲೇ ಗ್ರಾಮದ ಅಂಗನವಾಡಿ, ಅರಿವು ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಇದಕ್ಕಾಗಿ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು.

ಆಳಂದ ತಾಲ್ಲೂಕಿನ ಕೊಡಲ ಹಂಗರಗಾ, ತಡೋಳಾ, ಅಳಂಗಾ, ರುದ್ರವಾಡಿ ಹಾಗೂ ನಿಂಬರ್ಗಾ ಗ್ರಾಮಗಳಲ್ಲಿ ಗುರುವಾರ ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದಿಂದ ಕೈಗೊಂಡ ವಿವಿಧ ಕಾಮಗಾರಿಗಳ ಪ‍ರಿಶೀಲನೆ ನಡೆಸಿದ ಅವರು, ಅಂಗನವಾಡಿ ಹಾಗೂ ಗ್ರಾಮದ ಗ್ರಂಥಾಲಯಗಳನ್ನು (ಅರಿವು ಕೇಂದ್ರ) ಇನ್ನಷ್ಟು ಜನಸ್ನೇಹಿಯನ್ನಾಗಿ ಮಾಡಬೇಕು ಎಂದು ಸೂಚನೆ ನೀಡಿದರು.

ಪಂಚಾಯಿತಿ ವತಿಯಿಂದಲೇ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ತಲಾ ಒಂದೊಂದು ಕ್ಯಾನ್ ನೀರನ್ನು ಪೂರೈಸಬೇಕು. ಗ್ರಂಥಾಲಯಗಳಲ್ಲಿ ನಾಡಿನ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ಇರಿಸಬೇಕು. ನಿಯತಕಾಲಿಕೆಗಳನ್ನು ತರಿಸಬೇಕು. ಗ್ರಂಥಾಲಯಗಳಲ್ಲಿ ಶೌಚಾಲಯ ವ್ಯವಸ್ಥೆಯನ್ನು ಮಾಡಬೇಕು. ಅರಿವು ಕೇಂದ್ರದ ಹೊರಗೆ ದುಂಡು ಮೇಜನ್ನು ಇರಿಸಬೇಕು ಎಂದು ತಿಳಿಸಿದರು.

ADVERTISEMENT

ಕೊಡಲ ಹಂಗರಗಾ ಗ್ರಾಮದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ನಿರ್ಮಿಸುತ್ತಿರುವ ಮಹಿಳಾ ಸ್ವಸಹಾಯ ಸಂಘದ ಕೇಂದ್ರ ಹಾಗೂ ರೈತರ ಕೃಷಿ ಉತ್ಪನ್ನಗಳನ್ನು ಶೇಖರಿಸಿಡುವ ಶೆಡ್‌ಗಳನ್ನು ಪರಿಶೀಲಿಸಿದರು. ಅಳಂಗಾ ಗ್ರಾಮದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ಗ್ರಂಥಾಲಯಗಳಿಗೆ ಭೇಟಿ ನೀಡಿದರು.

ತಡೋಳಾ ಗ್ರಾಮದಲ್ಲಿ ‘ನಮ್ಮ ಹೊಲ, ನಮ್ಮ ದಾರಿ’ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ರಸ್ತೆಗಳನ್ನು ವೀಕ್ಷಿಸಿದರು. 

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಪಿಆರ್‌ಇ ಎಇಇ ಅಬ್ದುಲ್ ಫಜಲ್, ಜೂನಿಯರ್ ಎಂಜಿನಿಯರ್ ಲಿಂಗರಾಜ ಪೂಜಾರಿ, ನರೇಗಾ ತಾಲ್ಲೂಕು ಸಂಯೋಜಕ ಗುರುರಾಜ ಪಾಟೀಲ ಹಾಗೂ ಆಯಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

ಗ್ರಂಥಾಲಯಕ್ಕೆ ಪುಸ್ತಕ ನೀಡಿದ ದಾನಿಗಳ ಹೆಸರನ್ನು ಬರೆಸಿ ಗ್ರಂಥಾಲಯದಲ್ಲಿ ಪ್ರದರ್ಶಿಸಬೇಕು. ಪ್ರಮುಖ ದಿನಪತ್ರಿಕೆಗಳನ್ನು ಇರಿಸಬೇಕು
-ಭಂವರ್ ಸಿಂಗ್ ಮೀನಾ ಜಿಲ್ಲಾ ಪಂಚಾಯಿತಿ ಸಿಇಒ

ಸಿಇಒಗೆ ಹಾದಿ ತಪ್ಪಿಸಲೆತ್ನಿಸಿದ ಎಂಜಿನಿಯರ್!:

ನಿಂಬರ್ಗಾ ಗ್ರಾಮದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಮಲ್ಟಿ ಆರ್ಚ್ ಚೆಕ್‌ಡ್ಯಾಂ ನೋಡಿದರೆ ಎಲ್ಲಿ ತಮ್ಮ ‘ಬಂಡವಾಳ‘ ಬಯಲಾಗುವುದೋ ಎಂದು ಹೆದರಿದ ಪಿಆರ್‌ಇ ಎಂಜಿನಿಯರ್‌ಗಳು ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ ಅವರ ಹಾದಿ ತಪ್ಪಿಸಲು ಯತ್ನಿಸಿ ವಿಫಲರಾದರು. ಚೆಕ್ ಡ್ಯಾಂ ನೋಡಲು ಸಿಇಒ ಅವರು ಬಯಸಿದಾಗ ಅಲ್ಲಿ ಒಂದು ಕಿ.ಮೀ. ವರೆಗೆ ಮಾತ್ರ ಬೈಕ್ ಹೋಗುತ್ತದೆ. ಅಲ್ಲಿಂದ ಒಂದು ಕಿ.ಮೀ. ನಡೆದುಕೊಂಡೇ ಹೋಗಬೇಕು ಎಂದು ಎಂಜಿನಿಯರ್ ಹೇಳಿದರು.  ಎಂಜಿನಿಯರ್ ಹೇಳಿಕೆ ಮೇಲೆ ಸಂಶಯ ವ್ಯಕ್ತಪಡಿಸಿದ ಸಿಇಒ ಬೈಕ್ ಏರಿ ಹೊರಟರು. ಮುಖ್ಯ ರಸ್ತೆಯಿಂದ ಅರ್ಧ ಕಿ.ಮೀ. ಮಾತ್ರ ಇತ್ತು! ಕಳಪೆ ಕಾಮಗಾರಿಯಾಗಿದ್ದನ್ನು ಗಮನಿಸಿದ ಸಿಇಒ ಅವರು ಆ ಕಾಮಗಾರಿಯ ಬಿಲ್ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.