
ಕಮಲಾಪುರ: ತಾಲ್ಲೂಕಿನ ಧಮ್ಮೂರ ಪುನರ್ವಸತಿ ಕೇಂದ್ರದಲ್ಲಿ ಈಚೆಗೆ ವೃದ್ಧೆಯೊಬ್ಬರ ಕತ್ತು ಬಿಗಿದು ಕೊಲೆಗೈದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆಸ್ತಿ ಆಸೆಗಾಗಿ ಮೊಮ್ಮಕ್ಕಳೇ ಅಜ್ಜಿಯ ಕೊಲೆ ಮಾಡಿರುವುದು ತಿಳಿದುಬಂದಿದೆ.
ಕಳೆದ ನ.19ರ ರಾತ್ರಿ ವೃದ್ಧೆ ರಾಧಾಬಾಯಿ ಅಣ್ಣಪ್ಪ ತಳಕೇರಿ (70) ಅವರ ಮೃತದೇಹ ಅವರ ಮನೆಯಲ್ಲೇ ಪತ್ತೆಯಾಗಿತ್ತು. ಕತ್ತಿಗೆ ಬಿಗಿದ ಗಾಯ, ತಲೆಗೆ ರಕ್ತದ ಗಾಯಗಳಾಗಿದ್ದವು. ಇದೊಂದು ಕೊಲೆ ಎಂದು ಶಂಕಿಸಿದ ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು.
ಕೊಲೆಯಾದ ರಾಧಾಬಾಯಿ ಅವರ ಪುತ್ರ ಮಲ್ಲಿಕಾರ್ಜುನನ ಮಕ್ಕಳಾದ ಶಿವರಾಜ (21) ಇನ್ನೊಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಾಗಿದ್ದಾನೆ.
ರಾಧಾಬಾಯಿ ಹೆಸರಿನಲ್ಲಿ ಸುಮಾರು 5 ಎಕರೆ ಜಮೀನಿದ್ದು, ಈ ಸಂಬಂಧ ರಾಧಾಬಾಯಿ ಜೊತೆ ಸೊಸೆ ಹಾಗೂ ಮೊಮ್ಮಕ್ಕಳು ಸೇರಿ ಆಗಾಗ ಕಲಹ ಮಾಡುತ್ತಿದ್ದರು. ರಾಧಾಬಾಯಿ ಪತಿ ಅಣ್ಣಪ್ಪ, ಮಗ ಮಲ್ಲಿಕಾರ್ಜುನ ಒಂದೆಡೆ ವಾಸಿಸುತ್ತಿದ್ದರು. ಪಕ್ಕದಲ್ಲೇ ರಾಧಾಬಾಯಿಯ ಸೊಸೆ ಹಾಗೂ ಮೊಮ್ಮಕ್ಕಳು ವಾಸಿಸುತ್ತಿದ್ದರು. ತನ್ನ ತಾತನಿಗೆ ಊಟ ಕೊಡುವ ವಿಚಾರದಲ್ಲಿ ರಾಧಾಬಾಯಿ ಹಾಗೂ ಮೊಮ್ಮಕ್ಕಳ ನಡುವೆ ಜಗಳ ಆರಂಭವಾಗಿದೆ. ನೀವೇನು ನಮ್ಮನ್ನು ನೋಡಿಕೊಳ್ಳುತ್ತಿದ್ದೀರಾ? ನಿಮಗೆ ನಾನು ಆಸ್ತಿಕೊಡುವುದಿಲ್ಲ ಎಂದು ಶಿವರಾಜ ಹಾಗೂ ಆತನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ರೊಚ್ಚಿಗೆದ್ದ ಶಿವರಾಜ ಹಾಗೂ ಆತನ ಸಹೋದರ ಸೇರಿ ರಾಧಾಬಾಯಿ ಕತ್ತಿಗೆ ಟವೆಲ್‌ನಿಂದ ಬಿಗಿದು ಕೊಲೆಗೈದಿದ್ದಾರೆ. ಮನೆಯಲ್ಲಿ ರಾಧಾಬಾಯಿಯ ಸೊಸೆ, ಮಗ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿದ್ದಾರೆ.
ಜೊತೆಯಲ್ಲೇ ಓಡಾಡಿದ ಆರೋಪಿಗಳು: ಪೊಲೀಸರು ತನಿಖೆ ನಡೆಸುವಾಗ ಕೊಲೆ ಬಗ್ಗೆ ತಮಗೆ ಅರಿವಿಲ್ಲದವರಂತೆ ನಟಿಸಿದ ಆರೋಪಿಗಳು ಪೊಲೀಸರ ಜೊತೆಯಲ್ಲೇ ಓಡಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಈ ಇಬ್ಬರನ್ನು ಬಂಧಿಸಿದ ಪೊಲೀಸರು ವಿಚಾರಣೆಣೆ ನಡೆಸಿದಾಗ ಬಾಯಿಬಿಟ್ಟಿದ್ದಾರೆ.
ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಎಎಸ್‌ಪಿ ಮಹೇಶ ಮೇಘಣ್ಣವರ, ಡಿವೈಎಸ್‌ಪಿ ಲೋಕೇಶ್ವರಪ್ಪ ಪೂಜಾರಿ ಮಾರ್ಗದರ್ಶನದಲ್ಲಿ ಸಿಪಿಐ ಶಿವಶಂಕರ ಸಾಹು ನೇತೃತ್ವದ ಪಿಎಸ್‌ಐ ಬಸವರಾಜ ಚಿತ್ತಕೋಟಾ, ಸಿಬ್ಬಂದಿ ರಾಮಚಂದ್ರ, ಶಾಂತಪ್ಪ, ಕಿಶನ ಜಾಧವ, ಕುಪೇಂದ್ರ, ಭೀಮಾಶಂಕರ, ರಾಜಶೇಖರ, ಸಿದ್ದಲಿಂಗ, ಸೋಮಶೇಖರ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.