
ಜೇವರ್ಗಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ದೇಶದಲ್ಲಿಯೇ ಮಾದರಿಯಾಗಿದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಕಟ್ಟಡದ ಎರಡನೇ ಮಹಡಿಯಲ್ಲಿ ಸೋಮವಾರ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ‘ಚುನಾವಣೆ ವೇಳೆ ಜನರಿಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಪಕ್ಷ ನಡೆದುಕೊಂಡು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ಅವುಗಳ ಅನುಷ್ಠಾನದಲ್ಲಿ ಇರುವ ಸಮಸ್ಯೆಗಳನ್ನು ದೂರ ಮಾಡಲು ತಾಲ್ಲೂಕು ಮಟ್ಟದ ಸಮಿತಿ ರಚಿಸಲಾಗಿದೆ’ ಎಂದು ಹೇಳಿದರು.
‘ಸರ್ಕಾರದ ಯೋಜನೆ ತಲುಪುವಲ್ಲಿ ವಿಳಂಬವಾದರೆ ಜನರು ಕಚೇರಿಗೆ ಬಂದು ಪ್ರಶ್ನಿಸಬಹುದು. ಅದಕ್ಕಾಗಿ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿಯೂ ಸಮತಿ ರಚನೆ ಮಾಡಿ ಯೋಜನೆಯನ್ನು ಅರ್ಹರಿಗೆ ತಲುಪಿಸಲಾಗಿತ್ತದೆ. ಜನಪ್ರತಿನಿಧಿಗಳು ತಮಗೆ ಸಿಕ್ಕ ಅಧಿಕಾರವನ್ನು ವೈಭವದ ಜೀವನ ನಡೆಸುವುದಕ್ಕೆ ಬಳಸಿಕೊಳ್ಳದೆ ಜನಸೇವಕರಾಗಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ನೂತನ ಅಧ್ಯಕ್ಷ ಶೌಕತ್ ಅಲಿ ಆಲೂರ ಮಾತನಾಡಿ, ‘ಅಭಿವೃದ್ಧಿಗೆ ಪೂರಕವಾಗಿ ಗ್ಯಾರಂಟಿ ಸಮಿತಿ ಕೆಲಸ ಮಾಡಲಿದೆ. ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ಸದುಪಯೋಗವಾಗುವಂತೆ ಕ್ರಮವಹಿಸುತ್ತೇವೆ’ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ ಇಒ ರವಿಚಂದ್ರರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗ ರೆಡ್ಡಿ ಇಟಗಿ, ರುಕುಂ ಪಟೇಲ್ ಪೊಲೀಸ್ ಪಾಟೀಲ ಇಜೇರಿ, ರಾಜಶೇಖರ ಸಾಹು ಸೀರಿ, ಕಾಸಿಂ ಪಟೇಲ ಮುದವಾಳ, ಶಾಂತಪ್ಪ ಕೂಡಲಗಿ, ವಸಂತರಾವ ನರಿಬೋಳ, ಕಾಶೀರಾಯಗೌಡ ಯಲಗೋಡ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಪ್ರತಾಪ್ ಕಟ್ಟಿ, ಸಂಗನಗೌಡ ಪಾಟೀಲ ಗುಗಿಹಾಳ, ಮುನ್ನಾ ಪಟೇಲ ಯಾಳವಾರ, ಮಹಿಬೂಬ್ ಸಾಬ ಕೆಂಭಾವಿ, ಮಲ್ಲಣ್ಣ ಗೌಡ ಪಾಟೀಲ್ ಲಕಣಾಪೂರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.