ADVERTISEMENT

15 ವರ್ಷಗಳಿಂದ ಪಾಳುಬಿದ್ದ ಉದ್ಯಾನ ಜಾಗ!

ಕಾಂಪೌಂಡ್‌ ಕಟ್ಟಿ ಹೋದವರು ಮರಳಿ ಬಂದಿಲ್ಲ, ಬಿಡಾಡಿ ದನ, ಬೀದಿ ನಾಯಿಗಳಿಗೂ ಬೇಡವಾದ ನಿವೇಶನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
ಕಲಬುರ್ಗಿಯ ಕೊತ್ತಂಬರಿ ಬಡಾವಣೆಯಲ್ಲಿ ಇದ್ದ ಉದ್ಯಾನ ಈಗ ಖಾಲಿಯಾಗಿದೆ
ಕಲಬುರ್ಗಿಯ ಕೊತ್ತಂಬರಿ ಬಡಾವಣೆಯಲ್ಲಿ ಇದ್ದ ಉದ್ಯಾನ ಈಗ ಖಾಲಿಯಾಗಿದೆ   

ಕಲಬುರ್ಗಿ: ಒಂದು ಉದ್ಯಾನ ನಿರ್ಮಿಸಲು ಗರಿಷ್ಠ ಎಷ್ಟು ವರ್ಷ ಬೇಕು? ಗಿಡ– ಮರಗಳ ಬೆಳವಣಿಗೆಯನ್ನೂ ಸೇರಿಸಿ ಹೇಳುವುದಾದರೆ ಮೂರು ವರ್ಷ ಸಾಕು.

ಆದರೆ, ಇಲ್ಲಿನ 51ನೇ ವಾರ್ಡ್‌ನ ಶಕ್ತಿನಗರದ ಕೊತ್ತಂಬರಿ ಬಡಾವಣೆಯಲ್ಲಿ ಸಾರ್ವಜನಿಕ ಉದ್ಯಾನ ನಿರ್ಮಾಣ ಆರಂಭವಾಗಿ ಬರೋಬ್ಬರಿ 15 ವರ್ಷ ಉರುಳಿವೆ! ಇನ್ನೂ ಇಲ್ಲಿ ಅರ್ಧ ಕಾಂಪೌಂಡ್‌ ಬಿಟ್ಟರೆ ಬೇರೇನೂ ಸಿದ್ಧವಾಗಿಲ್ಲ!

ಕೊತ್ತಂಬರಿ ಬಡಾವಣೆ ಎಂಬ ಕಾರಣಕ್ಕೆ ಇದಕ್ಕೆ ಸೊಪ್ಪಿನ ಹೆಸರು ಇಡಲಾಗಿದೆ ಎಂದಲ್ಲ. ಈ ಪ್ರದೇಶದಲ್ಲಿ ಕೊತ್ತಂಬರಿ ಮನೆತನಕ್ಕೆ ಸೇರಿದ ಬಂಧುಗಳ ಸಂಖ್ಯೆ ಹೆಚ್ಚಿತ್ತು. ಹಿಂದೆ ಇದ್ದ ಕೆಲವೇ ಮನೆತನಗಳಲ್ಲಿ ಈ ಕುಟುಂಬದವರೇ ಪ್ರಮುಖರಾಗಿದ್ದರು. ಹಾಗಾಗಿ, ಈ ಬಡಾವಣೆ ಅವರ ಮನೆತನದ ಹೆಸರಿನಿಂದಲೇ ಗುರುತಿಸಲ್ಪಟ್ಟಿದೆ.

ADVERTISEMENT

51ನೇ ವಾರ್ಡಿನಲ್ಲಿ ಹಾದುಹೋದ ರೈಲು ಮಾರ್ಗದ ಪಕ್ಕದಲ್ಲೇ ಈ ಸಾರ್ವಜನಿಕ ಉದ್ಯಾನಕ್ಕೆ ಜಾಗ ಬಿಡಲಾಗಿದೆ. ಆರಂಭದಲ್ಲಿ ಕೆಲವು ಸಸಿ, ಹುಲ್ಲುಹಾಸು, ಕಾಂಪೌಂಡ್‌, ಸಿಮೆಂಟ್‌ ಬೆಂಚ್‌ ಮುಂತಾದವುಗಳನ್ನು ನಿರ್ಮಿಸಿದ್ದರು. ಕೆಲವೇ ವರ್ಷಗಳಲ್ಲಿ ಅದೆಲ್ಲವೂ ನಿರ್ನಾಮವಾಯಿತು. ಈವರೆಗೆ ಯಾರೂ ಕಣ್ಣೆತ್ತಿ ನೋಡಿಲ್ಲ. ಈ ವಾರ್ಡ್‌ ಸದಸ್ಯರು ಕೂಡ ಇಲ್ಲೊಂದು ಉದ್ಯಾನ ಇದೆ ಎಂದು ಮರೆತಿದ್ದಾರೆ. ಸುತ್ತಲಿನ ಸಾರ್ವಜನಿಕರು ಕಸ ಎಸೆಯಲು ಖಾಲಿ ಜಾಗ ಸಿಕ್ಕಿತು ಎಂದು ಸುಮ್ಮನಾಗಿದ್ದಾರೆ.

ಉದ್ಯಾನದ ಬಗ್ಗೆ ಆಸಕ್ತಿ ಹೊಂದಿದ ಇದೇ ಬಡಾವಣೆ ನಿವಾಸಿಗಳು ಇದರ ನೇರ ಹೊಣೆ ಪಾಲಿಕೆ ಅಧಿಕಾರಿಗಳು ಹಾಗೂ ಸದಸ್ಯರ ಮೇಲೆ ಹೊರೆಸುತ್ತಾರೆ. ಉದ್ಯಾನವನ್ನು ಮತ್ತೆ ನಿರ್ಮಿಸಿ ಹಿರಿಯರ ವಾಯುವಿಹಾರಕ್ಕೆ, ಮಕ್ಕಳ ಆಟಕ್ಕೆ, ಮಹಿಳೆಯರ ಉಲ್ಲಾಸಕ್ಕೆ ಅನುವು ಮಾಡಿಕೊಡಬೇಕು ಎಂದು ಕೋರಿ ಸಾಕಷ್ಟು ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ತೆಗೆದುಕೊಂಡಿಲ್ಲ ಎನ್ನುತ್ತಾರೆ ಅಲ್ಲಿಯ ನಿವಾಸಿ ರಾಮಚಂದ್ರ.

ಈ ಜಾಗದಲ್ಲಿ ಈಗ ಕಲ್ಲು– ಮಣ್ಣಿನ ಕುಂಪೆ ಬಿಟ್ಟರೆ ಬೇರೇನೂ ಇಲ್ಲ. ಬಿಡಾಡಿ ದನಗಳು, ಹಂದಿಗಳು, ಬೀದಿನಾಯಿಗಳ ವಾಸಸ್ಥಾನಕ್ಕೆ ಬಳಕೆಯಾಗುತ್ತಿದೆ. ಮುಳ್ಳುಕಂಟಿ ತುಂಬಿಕೊಂಡಿದ್ದು, ಮಕ್ಕಳು ಕ್ರಿಕೆಟ್‌ ಆಡಲು ಕೂಡ ಯೋಗ್ಯವಾಗಿಲ್ಲ. ಸುತ್ತಲಿನ ಜನ ಮನೆಯ ತ್ಯಾಜ್ಯವನ್ನು ಇಲ್ಲೇ ಎಸೆಯುವ ಮೂಲಕ ಇದನ್ನು ತಿಪ್ಪೆಯಾಗಿ ಮಾರ್ಪಡಿಸಿದ್ದಾರೆ.

ಜನರ ಬೇಡಿಕೆ ಏನು?:ಕೆಲವು ನಗರದಲ್ಲಿ ಎರಡು ಮೂರು ಉದ್ಯಾನ ಅಭಿವೃದ್ಧಿ‍ ಪಡಿಸಲಾಗಿದೆ. ಕೊತ್ತಂಬರಿ ಬಡಾವಣೆ ಈ ವಿಚಾರದಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈಗ ಪಾಲಿಕೆ ಸದಸ್ಯರು, ಮೇಯರ್ ಅವಧಿ ಮುಗಿದುಹೋಗಿದೆ. ಮುಂದೆ ಮತ ಕೇಳಲು ಬರುವವರಿಗೆ ನಮ್ಮ ಪ್ರಮುಖ ಬೇಡಿಕೆಯಾಗಿ ಉದ್ಯಾನವನ್ನೂ ಕೇಳುತ್ತೇವೆ ಎನ್ನುತ್ತಾರೆ ಸುಮಿತ್ರಾ.

ಆವರಣದಲ್ಲಿ ಹಸಿರು ಹುಲ್ಲು ಬೆಳೆಸಬೇಕು, ಸುತ್ತಲೂ ಸಸಿ ನೆಡಬೇಕು, ಇವುಗಳ ಪೋಷಣೆಗೆ ಕೊಳವೆಬಾವಿ ಕೊರೆಸಬೇಕು, ಮಕ್ಕಳಿಗೆ ಆಟದ ಸಲಕರಣೆ, ವಿಶ್ರಾಂತಿ ಪಡೆಯಲು ಆಸನ, ಹಿರಿಯರಿಗಾಗಿ ನಡಿಗೆ ಪಥ, ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸ್ವಚ್ಛತೆ ಕಾಪಾಡಬೇಕು ಎಂದು ನಿವಾಸಿ ಆಶಾ ಹೇಳುತ್ತಾರೆ.

*
15 ವರ್ಷಗಳಿಂದ ಈ ಜಾಗ ಹೀಗೇ ಇದೆ. ಸುತ್ತಲೂ ಕಟ್ಟಿದ ಕಲ್ಲಿನ ಕಾಂಪೌಂಡ್‌ ಬಿಟ್ಟರೆ ಮತ್ತೆ ಯಾವ ಅಭಿವೃದ್ಧಿ ಕೆಲಸವೂ ಆಗಿಲ್ಲ. ಉದ್ಯಾನವನ್ನು ಅಭಿವೃದ್ಧಿ ಮಾಡಿದರೆ ಅನುಕೂಲ
–ಸಂಜೀವಕುಮಾರ ಮೇಲಿನಮನಿ,ಯುವಕ

*
ಉದ್ಯಾನಕ್ಕೆ ಒಂದು ಸುಂದರ ರೂಪ ನೀಡುವುದು ಅಗತ್ಯವಿದ್ದು, ಅದಕ್ಕಾಗಿ ಪಾಲಿಕೆ ಇನ್ನಾದರೂ ಸೂಕ್ರ ಕ್ರಮ ಕೈಗೊಳ್ಳಬೇಕು. ವಾರ್ಡ್‌ನ ಮುಂದಿನ ಸದಸ್ಯರಾದರೂ ಗಮನ ಹರಿಸುವುದು ಸೂಕ್ತ
–ಗಿರೀಶ ಪಾಟೀಲ,ಕುಡಿಯುವ ನೀರು ಮಾರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.