ADVERTISEMENT

ಕಲಬುರಗಿ: ಡಿ.16 ರಂದು ಸುವರ್ಣ ವಿಧಾನಸೌಧದ ಎದುರು ಅತಿಥಿ ಉಪನ್ಯಾಸಕರ ಪ್ರತಿಭಟನೆ

ಸೇವಾ ಭದ್ರತೆ, 10 ತಿಂಗಳ ವೇತನಕ್ಕೆ ಒತ್ತಾಯ; ಡಿ 10ರಿಂದಲೇ ತರಗತಿ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 8:37 IST
Last Updated 13 ಡಿಸೆಂಬರ್ 2021, 8:37 IST
ಜಗಪ್ಪಾ ತಳವಾರ
ಜಗಪ್ಪಾ ತಳವಾರ   

ಕಲಬುರಗಿ: ಕಳೆದ 10–20 ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ಒಂದು ಸೆಮಿಸ್ಟರ್‌ಗೆ ಆಯ್ಕೆಯ ಸುತ್ತೋಲೆಯನ್ನು ಹಿಂಪಡೆದು 12 ತಿಂಗಳು ಮುಂದುವರಿಸಬೇಕು ಎಂದು ಒತ್ತಾಯಿಸಿ ಅತಿಥಿ ಉಪನ್ಯಾಸಕರು ಇದೇ 16ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗಪ್ಪಾ ತಳವಾರ, ‘ರಾಜ್ಯ ಸರ್ಕಾರವು ಮೊದಲಿನಿಂದಲೂ ಅತಿಥಿ ಶಿಕ್ಷಕರನ್ನು ಅತ್ಯಂತ ಅಮಾನವೀಯವಾಗಿ ಕಾಣುತ್ತಿದೆ. ಭದ್ರತಾ ಸಿಬ್ಬಂದಿಗಿಂತಲೂ ಕಡಿಮೆ ವೇತನ ನಮಗೆ ಕೊಡಲಾಗುತ್ತಿದೆ. 2019–20ರಲ್ಲಿ ಒಂದು ಸೆಮಿಸ್ಟರ್‌ನಲ್ಲಿ ಕೇವಲ ಎರಡೂವರೆ ತಿಂಗಳ ವೇತನವಷ್ಟೇ ಕೊಟ್ಟರು. ಸರ್ಕಾರ ಸಂಕಷ್ಟದಲ್ಲಿದೆ ಎಂದುಕೊಂಡು ನಾವೂ ಸಹಕಾರ ನೀಡಿದೆವು. ಆದರೆ, ಈಗಲೂ ಆ ಅನ್ಯಾಯವನ್ನು ಮುಂದುವರಿಸಿದ್ದಾರೆ. ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಕಾಯಂ ಉಪನ್ಯಾಸಕರು ₹ 2 ಲಕ್ಷ ವೇತನ ಪಡೆದರೆ ನಾವು ₹ 11 ಸಾವಿರ, ₹ 13 ಸಾವಿರ ವೇತನ ಪಡೆಯುತ್ತಿದ್ದೇವೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿದ್ದರೆ ತಮಗೆ ಸಮಸ್ಯೆಯ ಬಗ್ಗೆ ಗೊತ್ತಿದೆ. ನಿಮ್ಮ ಪರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ, ಆ ಭರವಸೆಯೂ ಹುಸಿಯಾಗಿದೆ’ ಎಂದು ಟೀಕಿಸಿದರು.

‘ಸರ್ಕಾರ ಅತಿಥಿ ಉಪನ್ಯಾಸಕರಿಗೆ ನೀಡುವ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಜೀವನ ನಡೆಸಲಾಗದೇ 160ಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, 10 ವರ್ಷ ಕರ್ತವ್ಯ ನಿರ್ವಹಿಸಿ, ಯುಜಿಸಿ ನಿಯಮಾವಳಿಗೆ ತಕ್ಕಂತೆ ಶೈಕ್ಷಣಿಕ ಅನುಭವ ಹೊಂದಿದವರಿಗೆ ₹ 30 ಸಾವಿರ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಡಿಸೆಂಬರ್ 10ರಿಂದಲೇ ತರಗತಿ ಬಹಿಷ್ಕಾರ ಚಳವಳಿ ನಡೆದಿದ್ದು, ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ತರಲು ಇದೇ 16ರಂದು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು. ನ್ಯಾಯ ಸಿಗುವವರೆಗೂ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಹೇಳಿದರು.

ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ಡಾ. ಶರಣಮ್ಮ ಪಾಟೀಲ ಮಾತನಾಡಿ, ‘ಇಲ್ಲಿಯವರೆಗೆ ನಮ್ಮ ಹೋರಾಟದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿರಲಿಲ್ಲ. ಇನ್ನು ಮುಂದೆ ನಮ್ಮ ಪರವಾಗಿ ಅವರೂ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ. ಬೇರೆ ಉಪನ್ಯಾಸಕರನ್ನು ಕರೆತಂದು ಪಾಠ ನಡೆಸಲು ಮುಂದಾದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಣವೀರಪ್ಪಾ ಬೋಳೆವಾಡ, ಅತಿಥಿ ಉಪನ್ಯಾಸಕಿ ಡಾ. ಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.