ಕಲಬುರ್ಗಿ: ಇದೇ 8ರಂದು ಆರಂಭವಾಗಬೇಕಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಸೆಪ್ಟೆಂಬರ್ 14ರಿಂದ ನಡೆಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿ.ವಿ. ಮೌಲ್ಯಮಾಪನ ಕುಲಸಚಿವ ಪ್ರೊ.ಸಂಜೀವಕುಮಾರ, ‘ಆರನೇ ಸೆಮಿಸ್ಟರ್‌ನ ರೆಗ್ಯುಲರ್ ಹಾಗೂ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದು, ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ರಿಪಿಟರ್ಸ್ ವಿದ್ಯಾರ್ಥಿಗಳು ಮಾತ್ರಪರೀಕ್ಷೆ ಬರೆಯಬಹುದಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ನೇರವಾಗಿ ಮುಂದಿನ ಸೆಮಿಸ್ಟರ್‌ಗೆ ಬಡ್ತಿ
ನೀಡಲಾಗುತ್ತಿದೆ’ ಎಂದರು.
ಈ ಹಿಂದೆ ನಿಗದಿಯಂತೆ ಬಿ.ಎ., ಬಿ.ಎಸ್ಸಿ, ಬಿ.ಕಾಂ. ಬಿ.ಸಿ.ಎ. ಬಿ.ಎಸ್.ಡಬ್ಯ್ಲೂ, ಬಿ.ವಿ.ಎ. ಪದವಿಯ ಪರೀಕ್ಷೆಗಳು
ಸೆ 8ರಿಂದ ಆರಂಭವಾಗಬೇಕಿತ್ತು. ಆದರೆ, ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್–19 ಸೋಂಕು ತಡೆಗೆ ಪೂರ್ವ ಸಿದ್ಧತೆಗಳು ಮಾಡಿಕೊಳ್ಳದ್ದರಿಂದ ಹಾಗೂ ಪರೀಕ್ಷಾ ಶುಲ್ಕ ಭರ್ತಿಯಲ್ಲಿ ತಾಂತ್ರಿಕ ಕಾರಣಗಳಿಂದ ದಿಢೀರನೆ ಪರೀಕ್ಷೆಗಳನ್ನು ರದ್ದು
ಪಡಿಸಲಾಗಿದೆ.
‘ಸೆ 8ರ ಬದಲು ಈಗ ಸೆ 14ರಿಂದ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು’ ಎಂದು ಸಂಜೀವಕುಮಾರ ತಿಳಿಸಿದ್ದಾರೆ.
65,401 ವಿದ್ಯಾರ್ಥಿಗಳು: ನಾಲ್ಕು ಜಿಲ್ಲೆಗಳಲ್ಲಿ ಪರೀಕ್ಷೆಗೆ 181 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಲಬುರ್ಗಿ–65, ಬೀದರ್–65, ಯಾದಗಿರಿ–33 ಮತ್ತು ರಾಯಚೂರಿನಲ್ಲಿ 42 ಕೇಂದ್ರಗಳನ್ನು ಗುರುತಿಸಲಾಗಿದೆ. ಒಟ್ಟು 65,401 ವಿದ್ಯಾರ್ಥಿಗಳು
ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಆರನೇ ಸೆಮಿಸ್ಟರ್‌ನ ರೆಗ್ಯುಲರ್ ಮತ್ತು ರಿಪಿಟರ್ಸ್ ಎರಡೂ ಸೇರಿ 27,791 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಎರಡನೇ ಸೆಮಿಸ್ಟರ್‌ಗೆ 17,316 ಹಾಗೂ ನಾಲ್ಕನೇ ಸೆಮಿಸ್ಟರ್‌ಗೆ 20,284 ವಿದ್ಯಾರ್ಥಿಗಳು ರಿಪೀಟರ್ಸ್ ಆಗಿ ಕುಳಿತುಕೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.