ADVERTISEMENT

ಶರಣರ ವಚನಗಳ ಬೆಳಕು ಶಾಶ್ವತ: ಮಹಾಂತ ಸ್ವಾಮೀಜಿ

ಹಡಪದ ಅಪ್ಪಣ್ಣನವರ 890ನೇ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 5:43 IST
Last Updated 22 ಜುಲೈ 2024, 5:43 IST
ಕಲಬುರಗಿಯ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಮುದಗಲ್ಲನ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಗಣ್ಯರು ಹಾಜರಿದ್ದರು
ಕಲಬುರಗಿಯ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಮುದಗಲ್ಲನ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಗಣ್ಯರು ಹಾಜರಿದ್ದರು   

ಕಲಬುರಗಿ: ‘ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದವರು ಶರಣರು. ಅವರ ವಚನಗಳ ಬೆಳಕು ಶಾಶ್ವತ’ ಎಂದು ಕಲ್ಯಾಣ ಆಶ್ರಮ ಮಹಾಂತೇಶ್ವರ ಮಠ ಮುದಗಲ್ಲನ ಮಹಾಂತ ಸ್ವಾಮೀಜಿ ಹೇಳಿದರು.

ನಗರದ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಹಾಗೂ ಹಡ‍ಪದ ಸಮಾಜದಿಂದ ನಡೆದ ನಿಜಸುಖಿ ಹಡಪದ ಅಪ್ಪಣ್ಣನವರ 890ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ಈ ಸಮಾಜದ್ದು ತಾಯಿ ಸಮಾನ ಸೇವೆ. ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ಅಪ್ಪಣ್ಣನವರ 243 ವಚನಗಳು, ಲಿಂಗಮ್ಮ ತಾಯಿಯ 114 ವಚನಗಳು ಲಭ್ಯ ಇವೆ. ಸಮಾಜದವರು ವರ್ಷಕ್ಕೊಮ್ಮೆ ಸೇರಿ ಚಪ್ಪಾಳೆ ತಟ್ಟಿ  ಹೋಗಬೇಡಿ. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ, ದುಶ್ಚಟಗಳನ್ನು ದೂರವಿಡಿ’ ಎಂದು ಸಲಹೆ ನೀಡಿದರು.

ಚಿತ್ತಾಪುರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ‘ಅಪ್ಪಣ್ಣನವರು ಬಸವಣ್ಣನವರ ಉಸಿರಾಗಿದ್ದರು. ಧ್ಯಾನದಷ್ಟೇ ದಾನ ಕೂಡ ಮುಖ್ಯ. ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕು’ ಎಂದು ಹೇಳಿದರು.

ADVERTISEMENT

ಅಬಕಾರಿ ಇಲಾಖೆಯ ವಿಭಾಗೀಯ ಜಂಟಿ ಆಯುಕ್ತ ಬಸವರಾಜ ಹಡಪದ ಮಾತನಾಡಿ, ‘ಶರಣರು ಅಂತರಾತ್ಮ ಶೋಭೆಗೆ ಮಹತ್ವ ಕೊಟ್ಟಿದ್ದರು. ಇಂದು ನಾವೆಲ್ಲಾ ಆಸೆಯಿಂದ ಅವಾಂತರ ಮಾಡಿಕೊಳ್ಳುತ್ತಿದ್ದೇವೆ. ಶರಣರ ಸಾಹಿತ್ಯ ಓದಿದರೆ ಯಾವ ಶಾಸ್ತ್ರವನ್ನೂ ಓದುವ ಅಗತ್ಯವಿಲ್ಲ. ಮಾತೃಭಾಷೆ ಮಾತ್ರ ಚಿಂತನೆಗೆ ಹಚ್ಚುತ್ತದೆ. ಹಾಗಾಗಿ ಆಂಗ್ಲ ವ್ಯಾಮೋಹ ಬಿಟ್ಟು, ಮಕ್ಕಳನ್ನು ಮಾತೃಭಾಷೆಯಲ್ಲಿ ಓದಿಸಿ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಹಾಬಾದ್‌ನ ರಾಜಶಿವಯೋಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಆರ್‌ಟಿಒ ನೂರ ಮಹಮ್ಮದ್‌ ಪಾಶಾ, ತಹಶೀಲ್ದಾರ್‌ ಜಗದೀಶ ಚೌರ, ಸವಿತಾ ಸಮಾಜದ ಅಧ್ಯಕ್ಷ ಆನಂದ ವಾರೀಕ, ಬಸವರಾಜ ಸೂಗೂರ, ಶರಣು ಸೂರ್ಯವಂಶಿ, ಮಲ್ಲಿಕಾರ್ಜುನ ಮಾನೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಅನುದಾನ ನೀಡದಿದ್ದರೆ ಬೆಂಗಳೂರು ಚಲೋ

ಹಡಪದ ಅಪ್ಪಣ್ಣ ಸಮಾಜದ ಕಲಬುರಗಿ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಮಾತನಾಡಿ ‘ರಾಜ್ಯದಲ್ಲಿ ಸಮಾಜದ ಸುಮಾರು 20 ಲಕ್ಷ ಜನತೆ ಇದೆ. ಆದರೆ ಸಮಾಜ ಹಿಂದುಳಿದಿದೆ. ಸರ್ಕಾರ ಅಭಿವೃದ್ಧಿ ನಿಗಮವನ್ನೇನೋ ಮಾಡಿದೆ. ಆದರೆ ಅನುದಾನ ನೀಡಿಲ್ಲ. ಸರ್ಕಾರ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮಕ್ಕೆ ₹ 100 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಸಮಾಜದ ಒಬ್ಬರನ್ನು ಎಂಎಲ್‌ಸಿ ಮಾಡಬೇಕು. ಇಲ್ಲದಿದ್ದರೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.