ADVERTISEMENT

ವಿಳಂಬ: ಸ್ಥಗಿತಗೊಂಡ ಹ್ಯಾಂಡ್‌ಬಾಲ್‌ ಅಂಗಣದ ಕಾಮಗಾರಿ

ಕೆಆರ್‌ಐಡಿಎಲ್‌ನಿಂದ ಪಿಡಬ್ಲ್ಯುಡಿಗೆ ಕಾಮಗಾರಿ ವರ್ಗಾವಣೆ

ಮಲ್ಲಪ್ಪ ಪಾರೇಗಾಂವ
Published 28 ಜನವರಿ 2026, 7:03 IST
Last Updated 28 ಜನವರಿ 2026, 7:03 IST
ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಹ್ಯಾಂಡ್‌ಬಾಲ್‌ ಅಂಗಣವನ್ನು ಅಗೆದಿರುವುದು
ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಹ್ಯಾಂಡ್‌ಬಾಲ್‌ ಅಂಗಣವನ್ನು ಅಗೆದಿರುವುದು   

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಹ್ಯಾಂಡ್‌ಬಾಲ್‌ ಅಂಗಣಗಳನ್ನು ‘ಸಿಂಥೆಟಿಕ್‌ ಬೇಸ್‌ ಒಳಾಂಗಣ’ಗಳಾಗಿ ಅಭಿವೃದ್ಧಿಪಡಿಸವುದಕ್ಕಾಗಿ ಅಗೆದು ಹಾಕಲಾಗಿದೆ. ಅಗೆದು ಹಲವು ತಿಂಗಳು ಗತಿಸಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಆದರೆ, ಈವರೆಗೂ ಅಂಗಣದ ಅಭಿವೃದ್ಧಿ ಕಾಮಗಾರಿ ಮರು ಆರಂಭವಾಗಿಲ್ಲ. ಇದರಿಂದಾಗಿ ಆಟಗಾರರು ತೊಂದರೆ ಅನುಭವಿಸುವಂತಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ)ಯ ಮ್ಯಾಕ್ರೋ ಯೋಜನೆ ಅಡಿಯಲ್ಲಿ ಸುಮಾರು ₹3.45 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್‌ ಬೇಸ್‌(ಸದ್ಯ ಕ್ರೀಡಾಂಗಣದಲ್ಲಿರುವ ಟೆನಿಸ್‌ ಅಂಗಣದಂತೆ) ಒಳಾಂಗಣ ನಿರ್ಮಾಣ ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ವಹಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಅನುದಾನವನ್ನು ₹1.70 ಕೋಟಿಗೆ ಕಡಿತಗೊಳಿಸಿ, ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ.

‘ಹ್ಯಾಂಡ್‌ಬಾಲ್‌ ಅಂಗಣಗಳು ಸುಸ್ಥಿತಿಯಲ್ಲಿಯೇ ಇದ್ದವು. ಅಭಿವೃದ್ಧಿ ನೆಪ ಮಾಡಿ ಅಗೆದು ಹಾಕಿದ್ದಾರೆ. ಅಗೆದು ಸುಮಾರು ವರ್ಷವಾಗುತ್ತ ಬಂದಿದೆ. ನಮಗೆ ಅಭ್ಯಾಸಕ್ಕಾಗಿ ಅಂಗಣ ಇಲ್ಲದಂತಾಗಿದೆ. ನಾವು ಖಾಸಗಿ ಮೈದಾನಗಳಿಗೆ ತೆರಳಿ ಅಭ್ಯಾಸ ಮಾಡಬೇಕಾಗಿದೆ. ಮೈದಾನ ಇಲ್ಲದ್ದರಿಂದ ಕೆಲ ಆಟಗಾರರು ಹ್ಯಾಂಡ್‌ಬಾಲ್‌ನತ್ತ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಅಂಗಣಗಳನ್ನು ನಿರ್ಮಿಸಿಕೊಡಬೇಕು’ ಎಂದು ಆಟಗಾರರು ಒತ್ತಾಯಿಸಿದರು.

ADVERTISEMENT

‘ಹ್ಯಾಂಡ್‌ಬಾಲ್‌ ಅಂಗಣದ ಕಾಮಗಾರಿಯನ್ನು ಪಿಎಡಬ್ಲ್ಯುಡಿಗೆ ವರ್ಗಾವಣೆ ಮಾಡಿ 15 ದಿನಗಳಷ್ಟೇ ಆಗಿದೆ. ಟೆಂಡರ್‌ ಹಂತದಲ್ಲಿದ್ದು, ಶೀಘ್ರ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದು. ಅಂಗಣದ ಯೋಜನೆ ಸಿದ್ಧವಾಗಿದ್ದು, ಮೊದಲ ಹಂತದಲ್ಲಿ ಸಿಂಥೆಟಿಕ್‌ ಬೇಸ್‌ ಒಳಾಂಗಣ ನಿರ್ಮಾಣ ಕೈಗೊಳ್ಳಲಾಗುವುದು. ಹಂತಹಂತವಾಗಿ ಪ್ರೇಕ್ಷಕರ ಗ್ಯಾಲರಿ, 2 ಚೇಂಜ್‌ ರೂಮ್‌, ಫ್ಲಡ್‌ ಲೈಟ್‌ ಸೇರಿದಂತೆ ವಿವಿಧ ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರೊಬ್ಬರು ಮಾಹಿತಿ ನೀಡಿದರು.

ಹ್ಯಾಂಡ್‌ಬಾಲ್‌ ಅಂಗಣವಿಲ್ಲದೆ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಶೀಘ್ರ ಅಂಗಣ ನಿರ್ಮಿಸಿದರೆ ಅನುಕೂಲವಾಗುತ್ತದೆ.
– ನವೀನ್‌ ನವಲಗಿರಿ, ಆಟಗಾರ
ಎರಡು ಬಾರಿ ರಾಷ್ಟ್ರೀಯ ತಂಡದಲ್ಲಿ ಆಡಿದ್ದೇನೆ. ಈ ವರ್ಷ ಮೈದಾನ ಅಗೆದಿದ್ದರಿಂದ ಅಭ್ಯಾಸ ಮಾಡಲಿಕ್ಕೆ ಆಗಲಿಲ್ಲ.
– ಅಸ್ಮಿತಾ ಸಂತೋಷ, ಆಟಗಾರ್ತಿ

ಅನುದಾನ ಕಡಿತ; ಬೇಸರ ಹ್ಯಾಂಡ್‌ಬಾಲ್‌

ಸುಸಜ್ಜಿತ 2 ಒಳಾಂಗಣಗಳ ನಿರ್ಮಾಣಕ್ಕಾಗಿ ₹7 ಕೋಟಿಗಿಂತಲೂ ಹೆಚ್ಚು ಹಣಬೇಕು. ಇಲಾಖೆಯೇ ಮೊದಲು ₹ 7 ಕೋಟಿಯನ್ನು ಎರಡು ಹಂತಗಳಲ್ಲಿ ನಿರ್ಮಾಣ ಕಾಮಗಾರಿಗಾಗಿ ಮಂಜೂರುಗೊಳಿಸಿ ಕೆಆರ್‌ಐಡಿಎಲ್‌ಗೆ ಕಾಮಗಾರಿಯನ್ನು ನೀಡಿತ್ತು. ಆದರೆ ಕಾಮಗಾರಿ ವಿಳಂಬ ಮಾಡಿದ್ದರಿಂದ ಅನುದಾನವನ್ನು ಕಡಿತಗೊಳಿಸಿ ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯನ್ನು ವರ್ಗಾಯಿಸಲಾಗಿದೆ. ಆದರೆ ಇಷ್ಟು ಕಡಿಮೆ ಅನುದಾನದಲ್ಲಿ ಸುಸಜ್ಜಿತ ಒಳಾಂಗಣ ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ ಮೊದಲಿದ್ದಷ್ಟೇ ಅನುದಾನ ನೀಡಬೇಕು ಎಂದು ಯುವ ಮತ್ತು ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದ್ದೇವೆ’ ಎಂದು ಕಲಬುರಗಿ ಹ್ಯಾಂಡ್‌ಬಾಲ್‌ ಅಸೋಸಿಯೇಷನ್‌ ಗೌರವ ಕಾರ್ಯದರ್ಶಿ ಹಾಗೂ ತರಬೇತುದಾರ ದತ್ತಾತ್ರೇಯ ಜೇವರ್ಗಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.