ADVERTISEMENT

ಭಾರಿ ಮಳೆ; ಹೊಲಗಳು ಜಲಾವೃತ

ಚಿಂಚೊಳಿ ತಾಲ್ಲೂಕಿನ ವಿವಿಧ ಗ್ರಾಮಗಳ ಮನೆಗಳಲ್ಲಿ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 11:50 IST
Last Updated 5 ಸೆಪ್ಟೆಂಬರ್ 2021, 11:50 IST
ಮಳೆಯಿಂದಾಗಿ ಚಿಂಚೋಳಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಹೊಲಗಳಲ್ಲಿ ತೊಗರಿ ಬೆಳೆ ಜಲಾವೃತವಾಗಿರುವುದು
ಮಳೆಯಿಂದಾಗಿ ಚಿಂಚೋಳಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಹೊಲಗಳಲ್ಲಿ ತೊಗರಿ ಬೆಳೆ ಜಲಾವೃತವಾಗಿರುವುದು   

ಚಿಂಚೋಳಿ: ತಾಲ್ಲೂಕಿನ ವಿವಿಧೆಡೆ ಶನಿವಾರ ರಾತ್ರಿಯಿಡೀ ಸುರಿದ ಗುಡುಗು, ಮಿಂಚು ಸಹಿತ ಭಾರಿ ಮಳೆಯಿಂದ ಕೆಲ ಕಡೆ ಹೊಲಗಳು ಮುಳುಗಡೆಯಾಗಿದ್ದರೆ, ಇನ್ನೂ ಕೆಲ ಕಡೆ ಮನೆಗಳಲ್ಲಿ ನೀರು ನುಗ್ಗಿದೆ. ಕೆಲ ಕಡೆ ಸೇತುವೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಒಟ್ಟಾರೆ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಸೋಮಲಿಂಗದಳ್ಳಿ ಹೊಸ ಊರು, ಗಾರಂಪಳ್ಳಿ, ತಾಜಲಾಪುರ ಮತ್ತು ಪೋಲಕಪಳ್ಳಿ ಗ್ರಾಮಗಳ ನಡುವೆ ಸಂಪರ್ಕ ಕಡಿತವಾಗಿದ್ದು, ಅವು‌ ನಡುಗಡ್ಡೆಯಂತಾಗಿವೆ. ಕೊಳ್ಳೂರು ಗ್ರಾಮದಲ್ಲಿ ಮನೆಗಳಲ್ಲಿ ನೀರು ನುಗ್ಗಿದ್ದು, ಅಗತ್ಯ ವಸ್ತುಗಳೆಲ್ಲವೂ ನೀರುಪಾಲಾಗಿವೆ. ಅಣವಾರ, ಚಿಮ್ಮನಚೋಡ, ಶಾದಿಪುರ, ಪೋಲಕಪಳ್ಳಿ ಕುಪನೂರ, ಬೆನಕನಳ್ಳಿ. ರಾಯಕೋಡ ಹಾಗೂ ಶಿರೋಳ್ಳಿ ಗ್ರಾಮಗಳಲ್ಲಿ ಅಪಾರ‌ ಪ್ರಮಾಣದ ಹಾನಿ‌ಯಾಗಿದೆ.

ತಾಲ್ಲೂಕಿನ ಕುಪನೂರ ಗ್ರಾಮದ ಮಲ್ಲಿಕಾರ್ಜುನ ದೇವಾಲಯವು ನೀರಿನಿಂದ ಆವರಿಸಿಕೊಂಡಿದೆ. ರುದನೂರಿನ ತೋಂಟದಾರ್ಯ ಸಿದ್ದೇಶ್ವರ ಮಠವೂ ಜಲಾವೃತವಾಗಿದ್ದು, ರಾತ್ರಿ ಅಲ್ಲಿ ತಂಗಿದ್ದ ಬಸ್‌ಗೆ ಸಾಧ್ಯವಾಗಲಿಲ್ಲ. ಕನಕಪುರ ಗ್ರಾಮದಲ್ಲಿ ಬಸವರಾಜ‌ ಪ್ಯಾಟಿ ಎಂಬುವರ ಮನೆ ಮಳೆಯಿಂದ ಕುಸಿದಿದೆ.

ADVERTISEMENT

ಒಳ ಹರಿವು ಹೆಚ್ಚಳ: ತಾಲ್ಲೂಕಿನ‌ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯಕ್ಕೆ ಮತ್ತು ಚಂದ್ರಂಪಳ್ಳಿ‌ ಜಲಾಶಯಕ್ಕೆ ಒಳ ಹರಿವು‌ ಹೆಚ್ಚಾಗಿದೆ. ನಾಗರಾಳ‌ ಜಲಾಶಯಕ್ಕೆ 2400 ಕ್ಯುಸೆಕ್ ಒಳಹರಿವಿದ್ದು ಅಷ್ಟೇ ಪ್ರಮಾಣದ ನೀರು ನದಿಗೆ ಬಿಡಲಾಗಿದೆ.

ಚಂದ್ರಂಪಳ್ಳಿ‌ ಜಲಾಶಯಕ್ಕೆ 2088 ಕ್ಯುಸೆಕ್ ಒಳಹರಿವಿದ್ದು, 1244 ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ.‌ ಇದರಿಂದ ಸರನಾಲ ನದಿಯಲ್ಲಿ ಪ್ರವಾಹ ಉಂಟಾಗಿದೆ.‌ ಕೆಳದಂಡೆ ಮುಲ್ಲಾಮಾರಿ ಯೋಜನೆ ನಾಗರಾಳ ಜಲಾಶಯಕ್ಕೆ 2400 ಕ್ಯುಸೆಕ್ ಒಳ‌ಹರಿವಿದೆ. 1756 ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಇದರಿಂದ ಮುಲ್ಲಾಮಾರಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು ನದಿ ದಂಡೆಯ ಹೊಲಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ. ಇದರಿಂದ ಅಪಾರ ಹಾನಿಯಾಗಿದೆ.

ಮಳೆ ವಿವರ: ತಾಲ್ಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ ಚಿಂಚೋಳಿಯಲ್ಲಿ 90.6 ಮಿ.ಮೀ, ಕುಂಚಾವರಂನಲ್ಲಿ 35.2, ಐನಾಪುರದಲ್ಲಿ 60, ಸುಲೇಪೇಟದಲ್ಲಿ 34.8 ಮತ್ತು ಚಿಮ್ಮನಚೋಡದಲ್ಲಿ 72.2 ಮಿ.ಮೀ. ಮಳೆಯಾಗಿದೆ.

ಸೇತುವೆ ದುರಸ್ತಿಗೆ ಮನವಿ: ತಾಲ್ಲೂಕಿನ ಚಂದ್ರಂಪಳ್ಳಿ‌ ಜಲಾಶಯದ ಹೆಚ್ಚುವರಿ‌ ನೀರನ್ನು ಗೇಟು ತೆಗೆದು ಹೊರಬಿಟ್ಟಾಗ, ರೈತರು ಹೊಲಗಳಿಗೆ ತೆರಳುವ ಸೇತುವೆ ಹಾಳಾಗುತ್ತದೆ. ಈ ಸೇತುವೆಯನ್ನು ಕೂಡಲೇ ದುರಸ್ತಿಪಡಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜರೆಡ್ಡಿ ಪೊಲೀಸ ಪಾಟೀಲ‌ ನೇತೃತ್ವದಲ್ಲಿ ಗ್ರಾಮಸ್ಥರು ಶನಿವಾರ ತಹಶೀಲ್ದಾರ್, ಸಂಸದ ಡಾ. ಉಮೇಶ ಜಾಧವ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಭಜಂತ್ರಿ ಅವರಿಗೆ ಮನವಿಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.