ADVERTISEMENT

ಮಳೆ ರಭಸಕ್ಕೆ ಕುಸಿದ ಮನೆ ಗೋಡೆ

ರಸ್ತೆ ಸಂಚಾರ ವ್ಯತ್ಯಯ; ಮನೆಯೊಳಗೆ ನೀರು ನುಗ್ಗಿದ್ದರಿಂದ ಜಾಗರಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 10:18 IST
Last Updated 20 ಜುಲೈ 2020, 10:18 IST
ಕಲಬುರ್ಗಿಯ ಭವಾನಿ ಚೌಕ್ ಬಳಿಯ ಗೋಡೆ ಕುಸಿದು ಬಿದ್ದಿರುವುದು
ಕಲಬುರ್ಗಿಯ ಭವಾನಿ ಚೌಕ್ ಬಳಿಯ ಗೋಡೆ ಕುಸಿದು ಬಿದ್ದಿರುವುದು   

ಕಲಬುರ್ಗಿ: ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಎರಡು ಮನೆಗಳ ಗೋಡೆ ಕುಸಿದಿವೆ. ತಗ್ಗು ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಇಲ್ಲಿನ ಶೇಖ್ ರೋಜಾ ಬಡಾವಣೆಯ ಕಾವೇರಿ ನಗರದಲ್ಲಿ 30ಕ್ಕೂ ಹೆಚ್ಚು ಮನೆಗಳ ಸುತ್ತ ಮಳೆ ನೀರು ನಿಂತು, ಸಂಚಾರಕ್ಕೆ ಅಡಚಣೆ ಉಂಟಾಯಿತು. ಮತ್ತೆ ಕೆಲ ಮನೆಯೊಳಗೇ ನೀರು ನುಗ್ಗಿದ್ದರಿಂದ ನಿವಾಸಿಗಳು ಇಡೀ ರಾತ್ರಿ ಜಾಗರಣೆ ಮಾಡಬೇಕಾಯಿತು.

ಮನೆಯಲ್ಲಿನ ದಿನಸಿ ಸಾಮಗ್ರಿಗಳು, ಬಟ್ಟೆ ಇತರೆ ದಿನಬಳಕೆ ವಸ್ತುಗಳು ತೋಯ್ದವು. ಚರಂಡಿಗಳು ಇಲ್ಲದ ಕಾರಣ ನೀರು ರಸ್ತೆಯ ಮೇಲೇ ಹರಿಯಿತು. ಮತ್ತೆ ಕೆಲವು ಕಡೆ ಒಳಚರಂಡಿಯಲ್ಲಿ ಕಸ ಕಡ್ಡಿ ತುಂಬಿದ್ದರಿಂದ ನೀರು ಸರಾಗವಾಗಿ ಹರಿದು ಹೋಗಲಿಲ್ಲ.

ADVERTISEMENT

ಪ್ರತಿ ಮಳೆಗಾಲದಲ್ಲೂ ಶೇಖ್‌ ರೋಜಾ ಬಡಾವಣೆಯಲ್ಲಿ ಇದೇ ಸ್ಥಿತಿ ಮುಂದುವರಿಯುತ್ತದೆ. ಹಲವು ಬಾರಿ ಮನವಿ, ಪ್ರತಿಭಟನೆ ನಡೆಸಿದರೂ ಪಾಲಿಕೆ ಅಧಿಕಾರಿಗಳು ಗಮನ ಕೊಟ್ಟಿಲ್ಲ. ಚರಂಡಿಗಳನ್ನು ಈಗಲಾದರೂ ಸರಿ ಮಾಡಿಸಿ, ಜನರ ಗೋಳು ನಿವಾರಿಸಬೇಕು ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಕುಸಿದ ಗೋಡೆ, ತಪ್ಪಿದ ಅನಾಹುತ: ಭವಾನಿ ಚೌಕ ಬಳಿ ಮನೆಯ ಗೋಡೆ ಕುಸಿದು ಬಿದ್ದು, ಅಪಾರ ನಷ್ಟವಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಇಲ್ಲಿನ ಓಂಪ್ರಕಾಶ್ ಗೌಂವಾರ ಎಂಬುವವರ ಮನೆ ಗೋಡೆ ಕುಸಿದಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾಳಾಗಿವೆ ಎಂದು ಅವರು ಮಾಹಿತಿ ನೀಡಿದರು.

ಭಾನುವಾರ ರಾತ್ರಿಯೂ ಕೆಲ ಹೊತ್ತು ಜಿಟಿಜಿಟಿ ಮಳೆ ಸುರಿಯಿತು. ಪ್ರಮುಖ ಉದ್ಯಾನವನಗಳು ಕೆಸರಿಂದ ಆವೃತವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.