ADVERTISEMENT

ಕಲಬುರ್ಗಿ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ

ನಗರದ ರಸ್ತೆ ತುಂಬಿಕೊಂಡ ಚರಂಡಿ ಗಲೀಜು, ತಗ್ಗುಪ್ರದೇಶದ ಮನೆಗಳಿಗೆ ನೀರು

​ಪ್ರಜಾವಾಣಿ ವಾರ್ತೆ
Published 16 ಮೇ 2021, 2:39 IST
Last Updated 16 ಮೇ 2021, 2:39 IST
ಕಲಬುರ್ಗಿಯಲ್ಲಿ ಶನಿವಾರ ಸುರಿದ ಮಳೆಯಲ್ಲೇ ಸಂಚರಿಸಿದ ಬೈಕ್‌ ಸವಾರ
ಕಲಬುರ್ಗಿಯಲ್ಲಿ ಶನಿವಾರ ಸುರಿದ ಮಳೆಯಲ್ಲೇ ಸಂಚರಿಸಿದ ಬೈಕ್‌ ಸವಾರ   

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆ ಶನಿವಾರ ತಡರಾತ್ರಿಯವರೆಗೂ ಧಾರಾಕಾರ ಮಳೆ ಸುರಿಯಿತು. ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ಏಕಾಏಕಿ ಮಳೆಗಾಲದ ಅನುಭವ ಬಂತು. ಇಲ್ಲಿನ ಬ್ರಹ್ಮಪುರ ಹಾಗೂ ಓಂ ನಗರದ ತಗ್ಗು ಪ್ರದೇಶದ ಮನೆಗಳ ಅಂಗಳಕ್ಕೆ ನೀರು ನುಗ್ಗಿತು.

ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಮನೆ ಮಾಡಿತ್ತು. ಸಂಜೆ 7ರ ಸುಮಾರಿಗೆ ಏಕಾಏಕಿ ಆರಂಭವಾದ ಮಳೆ ಬಿಟ್ಟೂಬಿಡದೇ ಸುರಿಯಿತು. ಬಿರುಗಾಳಿ ಹಾಗೂ ಮಳೆಯ ರಭಸದ ಕಾರಣ ಹೊಸ ಜೇವರ್ಗಿ ರಸ್ತೆ, ಹಳೆ ಜೇವರ್ಗಿ ರಸ್ತೆ, ಗಂಗಾನಗರ, ವೆಂಕಟೇಶ್ವರ ಕಾಲೊನಿ, ಬ್ರಹ್ಮಪುರ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್‌ ತಂತಿಗಳು ತುಂಡಾಗಿ, ಒಂದು ತಾಸು ವಿದ್ಯುತ್‌ ವ್ಯತ್ಯಯ ಅನುಭವಿಸಬೇಕಾಯಿತು.

ಜಗತ್‌ ವೃತ್ತ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ಬಸ್‌ ನಿಲ್ದಾಣ ಆವರಣ, ಹೈಕೋರ್ಟ್‌ ಮುಂದಿನ ರಸ್ತೆ, ಲಾಳಗೇರಿ ಕ್ರಾಸ್‌ನಲ್ಲಿ ರಸ್ತೆಯ ತುಂಬ ಗಂಟೆಗಟ್ಟಲೇ ನೀರು ಸಂಗ್ರಹಿಗೊಂಡಿತು.

ADVERTISEMENT

‌ಖಾಜಾ ಕಾಲೊನಿ, ಶಕ್ತಿನಗರ, ರಾಮಮಂದಿರ ಪ್ರದೇಶ, ಸೂಪರ್ ಮಾರ್ಕೆಟ್‌, ಓಂ ನಗರ, ಗಂಜ್‌, ಹುಮನಾಬಾದ್‌ ರಿಂಗ್‌ ರಸ್ತೆ, ಸಂತೋಷ ನಗರ, ವೀರೇಂದ್ರ ಪಾಟೀಲ ಬಡಾವಣೆಗಳಲ್ಲಿ ಚರಂಡಿಗಳು ತುಂಬಿಕೊಂಡು ಕೊಚ್ಚೆ ನೀರು ರಸ್ತೆಯ ಮೇಲೆಲ್ಲ ಹರಿದಾಡಿತು.

ತಾಲ್ಲೂಕುಗಳಲ್ಲೂ ಮಳೆ: ಸೇಡಂ, ಚಿತ್ತಾಪುರ, ಕಾಳಗಿ, ಜೇವರ್ಗಿ, ಯಡ್ರಾಮಿ ತಾಲ್ಲೂಕಿನ ವಿವಿಧೆಡೆ ಕೂಡ ಮಳೆ ಸುರಿದಿದೆ. ಸಂಜೆ ಬಿರುಗಾಳಿ, ಗುಡುಗು, ಸಿಡಿಲಿನ ಸಮೇತ ಆರಂಭವಾದ ಮಳೆ ಗಂಟೆಗೂ ಹೆಚ್ಚು ಸಮಯ ಸುರಿಯಿತು.

‘ಚಂಡಮಾರುತದ ಪ್ರಭಾವದಿಂದಾಗಿ ಈ ಮಳೆ ಬಿದ್ದಿದೆ. ಇನ್ನೆರಡು ದಿನ ಮಾತ್ರ ಮುಂದುವರಿಯಲಿದ್ದು, ಮತ್ತೆ ಬೇಸಿಗೆ ವಾತಾವರಣ ಮರಳಿದೆ. ಇದರಿಂದ ಯಾವುದೇ ತರದ ಹಾನಿ ಇಲ್ಲ’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.