ADVERTISEMENT

ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ

ನಾಲ್ಕು ದಿನ ಹೊಲ ಹದ ಮಾಡಲು ಬಿಡುವು ನೀಡಿದ್ದ ವರುಣ, ರೈತರ ಮೊಗದಲ್ಲಿ ಮಂದಹಾಸ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 3:53 IST
Last Updated 13 ಜೂನ್ 2021, 3:53 IST
ಕಲಬುರ್ಗಿಯಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಲ್ಲಿ ವಾಹನ ಸಂಚಾರ ಕಂಡುಬಂದಿದ್ದು ಹೀಗೆ
ಕಲಬುರ್ಗಿಯಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಲ್ಲಿ ವಾಹನ ಸಂಚಾರ ಕಂಡುಬಂದಿದ್ದು ಹೀಗೆ   

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ಇನ್ನೊಂದು ಮಳೆಗಾಗಿ ಕಾಯುತ್ತ ಕೂತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ನಗರದಲ್ಲಿ ಬೆಳಿಗ್ಗೆಯಿಂದಲೇ ದಟ್ಟ ಮೋಡ ಕವಿದ ವಾತಾವರಣ ಇತ್ತು. ಸಂಜೆ 7ರ ಸುಮಾರಿಗೆ ಸಣ್ಣದಾಗಿ ಆರಂಭವಾದ ಮಳೆ, 8ರ ಸುಮಾರಿಗೆ ಬಿರುಸು ಪಡೆಯಿತು. ವೆಂಕಟೇಶ್ವರ ನಗರ, ಶಕ್ತಿನಗರ, ಶಾಸ್ತ್ರಿನಗರ, ಮಹಾವೀರ ನಗರ, ಗುಲ್ಲಾಬಾಡಿ, ಮೋಮಿನ್‌ಪುರ, ವೀರೇಂದ್ರ ಪಾಟೀಲ ಬಡಾವಣೆ, ಗುಲಬರ್ಗಾ ವಿಶ್ವವಿದ್ಯಾಲಯ‍ ಮತ್ತು ಹೈಕೋರ್ಟ್‌ ಸುತ್ತಮತ್ತಲ ಪ್ರದೇಶ, ಲಾಳಗೇರಿ, ಎಪಿಎಂಸಿ ಪ್ರದೇಶ ಸೇರಿದಂತೆ ನಗರದ ಹೊರವಲಯದಲ್ಲೂ ಭಾರಿ ಮಳೆಯಾಯಿತು.

ದರ್ಗಾ ಪ್ರದೇಶ, ಮೋಮಿನ್‌ಪುರ, ಮುಸ್ಲಿಂಚೌಕ್‌ ಪ್ರದೇಶ, ಗಾಜಿಪುರ, ಶೇಖ್‌ ಮೊಹಲ್ಲಾ, ಸೂಪರ್‌ ಮಾರ್ಕೆಟ್‌ ಪ್ರದೇಶ, ಖೂನಿ ಹವಾಲಾ ಪ್ರದೇಶ, ಕುವೆಂಪು ನಗರ, ಸಂತೋಷ ನಗರ, ಓಂ ನಗರ, ಸೋನಿಯಾ ಗಾಂಧಿ ಬಡಾವಣೆ ಸೇರಿದಂತೆ ಕಿರಿದಾದ ಹಲವು ಪ್ರದೇಶಗಳಲ್ಲಿ ರಸ್ತೆ ಮೇಲೆ ನೀರು ಗಂಟೆಗಟ್ಟಲೇ ಹರಿಯಿತು. ಬಹುತೇಕ ಕಡೆ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ಮಳೆ ನೀರು ರಸ್ತೆ ಮೇಲೆ ಸಂಗ್ರಹಗೊಂಡಿತು.

ADVERTISEMENT

ಇತ್ತ, ಗ್ರಾಮೀಣ ಪ್ರದೇಶದಲ್ಲಿ ಕೂಡ ಹದವಾದ ಮಳೆಯಾಗಿದೆ. ನಾಲ್ಕು ದಿನಗಳ ಬಿಡುವು ನೀಡಿ ಸುರಿದ ಮಳೆಯಿಂದ ರೈತರು ಹೊಲಗಳನ್ನು ಹದ ಮಾಡಲು ಅನುಕೂಲವಾಯಿತು. ಮುಂಗಾರು ಬಿತ್ತನೆಗೆ ಅವಸರ ಮಾಡದೇ ಇನ್ನೊಂದು ಮಳೆಗೆ ಕಾಯಿರಿ ಎಂದು ಹವಾಮಾನ ತಜ್ಞರು ಸಲಹೆ ನೀಡಿದ್ದರು. ಅದರ ನಿರೀಕ್ಷೆಯಂತೆಯೇ ಶನಿವಾರ ಸುರಿದ ಮಳೆ ರೈತರಿಗೆ ಹೆಚ್ಚು ಉಪಯುಕ್ತವಾಗಿದೆ.

ಜಿಲ್ಲೆಯ ಚಿಂಚೋಳಿ, ಸೇಡಂ, ಕಮಲಾಪುರ, ಚಿತ್ತಾಪುರ, ಕಲಬುರ್ಗಿ, ಅಫಜಪುರ, ಆಳಂದ, ಕಾಳಗಿ, ಜೇವರ್ಗಿ ತಾಲ್ಲೂಕುಗಳಲ್ಲಿ ಕೂಡ ಭರ್ಜರಿ ಮಳೆ ಸುರಿದಿದೆ. ವಿಶೇಷವಾಗಿ ಶಹಾಬಾದ್‌ ನಗರ, ವಾಡಿ ಪಟ್ಟಣ, ಚಿತ್ತಾಪುರ ತಾಲ್ಲೂಕಿನ ತಾಲ್ಲೂಕಿನ ಹಲಕರ್ಟಿ ಹಾಗೂ ಚಿಂಚೋಳಿ ತಾಲ್ಲೂಕಿನ ಚೇಂಗಟಾ ಗ್ರಾಮದಲ್ಲಿ ಮೂರು ತಾಸಿಗೂ ಹೆಚ್ಚು ಸಮಯ ಬಿರುಸಿನ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.