ADVERTISEMENT

ಇಲ್ಲಿ ಜೋಳದ ತೆನೆಯೇ ದೇವರಿಗೆ ಅಕ್ಷತೆ....

ಕುಪನೂರ: ಶ್ರದ್ಧಾ ಭಕ್ತಿಯ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 15:19 IST
Last Updated 16 ಜನವರಿ 2024, 15:19 IST
ಚಿಂಚೋಳಿ ತಾಲ್ಲೂಕು ಕುಪನೂರ ಗ್ರಾಮದ ಆರಾಧ್ಯ ದೇವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದಲ್ಲಿ ಅಪಾರ ಭಕ್ತರು ಜೋಳದ ತೆನೆಯ ಅಕ್ಷತೆ ಅರ್ಪಿಸಿದರು
ಚಿಂಚೋಳಿ ತಾಲ್ಲೂಕು ಕುಪನೂರ ಗ್ರಾಮದ ಆರಾಧ್ಯ ದೇವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದಲ್ಲಿ ಅಪಾರ ಭಕ್ತರು ಜೋಳದ ತೆನೆಯ ಅಕ್ಷತೆ ಅರ್ಪಿಸಿದರು   

ಚಿಂಚೋಳಿ: ತಾಲ್ಲೂಕಿನ ಕುಪನೂರ ಗ್ರಾಮದ ಆರಾಧ್ಯದೇವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಮಂಗಳವಾರ ಭಕ್ತಿ ಶ್ರದ್ಧೆ ಮತ್ತು ಭಾವೈಕ್ಯತೆಯಿಂದ ಸಂಭ್ರಮದಿಂದ ಜರುಗಿತು. ಉದ್ಭವಲಿಂಗ ಮತ್ತು ಪವಾಡಗಳ ಖ್ಯಾತಿಯಿಂದ ಅಪಾರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಮಲ್ಲಿಕಾರ್ಜುನ ಉತ್ಸವ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಗ್ರಾಮದ ದೇವರ ಗದ್ದುಗೆಯಿಂದ ದೇವಾಲುದವರೆಗೆ ಪಲ್ಲಕ್ಕಿ ಹಾಗೂ ನಂದಿಕೋಲು ಮೆರವಣಿಗೆ ಸುಮಂಗಲೆಯರ ಆರತಿ ಸೇವೆ ಹಾಗೂ ಭಜನೆಯೊಂದಿಗೆ ವೈಭವದಿಂದ ಜರುಗಿತು. ಪಲ್ಲಕ್ಕಿ ಹಾಗೂ ನಂದಿಕೋಲು ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಭಕ್ತರು ತಮ್ಮ ಹೊಲಗಳಿಂದ ತಂದಿದ್ದ ಜೋಳದ ತೆನೆ ಅಕ್ಷತೆ ರೂಪದಲ್ಲಿ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಹಾಗೂ ನಂದಿಕೋಲಿನ‌ ಮೇಲೆ ಎಸೆದು ಕೃತಾರ್ಥರಾದರು. ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಮದುವೆಯ ರೀತಿಯಲ್ಲಿ ನಡೆಯುತ್ತದೆ. ಜ.15ರಂದು ಮದು ಮಗ ಮಲ್ಲಿಕಾರ್ಜುನ ದೇವರಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮ ನಡೆಸಿ ದೇವಾಲಯದವರೆಗೆ ಪಲ್ಲಕ್ಕಿಯಲ್ಲಿ ಕರೆತಂದರೆ, ಜ.16ರಂದು ಮಂಗಳವಾರ ವಾದ್ಯಮೇಳ ಹಾಗೂ ಭಜನೆಯೊಂದಿಗೆ ಸಂಜೆ 6 ಗಂಟೆಗೆ ದೇವಾಲಯಕ್ಕೆ ಬಂದ ಮೇಲೆ ಭಕ್ತರು ಜೋಳದ ತೆನೆಯ ಅಕ್ಷತೆ ಹಾಕಿದರು. ನಂತರ ಮಹಾಪ್ರಸಾದ ಸ್ವೀಕರಿಸಿ ಮರಳಿದರು. ಮಲ್ಲಿಕಾರ್ಜುನ ದೇವರ ಜಾತ್ರೆ ಅಂಗವಾಗಿ ಸಮೀಪದ ವ್ಯಾವಹಾರಿಕ‌ಪಟ್ಟಣ ಸುಲೇಪೇಟದಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟು ಮುಚ್ಚಿ ಜಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು. ಬುಧವಾರ ಜಂಗಿ‌ ಪೈಲ್ವಾನರ ಕುಸ್ತಿ ಹಾಗೂ ದೇವರನ್ನು‌ ಮರಳಿ‌ ಕರೆದೊಯ್ಯುವ ಕಾರ್ಯಕ್ರಮ‌ ನಡೆಯಲಿದೆ. ಜಾತ್ರಾ‌ಮಹೋತ್ಸವದಲ್ಲಿ‌ ಜಗದೇವಯ್ಯ ಸ್ವಾಮಿ,‌ ನಿವೃತ್ತ ಶಿಕ್ಷಕ ನರಸಪ್ಪ ಪೂಜಾರಿ, ಮಲ್ಲಿಜಾರ್ಜುನ ಮಾಳಗಿ, ಸುರೇಶ ವೈದರಾಜ,ಶರಣಗೌಡ, ಪರಮೇಶ್ವರ ಟೆಂಗಳಿ,
ಶಿವಶರಣಪ್ಪ ಹಿರೇನ್,
ಮಹೇಶ ಪಾಟೀಲ್, ರಾಜಕುಮಾರ್ ಟೆಂಗಳಿ ಮೊದಲಾದವರು ಇದ್ದರು.

ಚಿಂಚೋಳಿ ತಾಲ್ಲೂಕು ಕುಪನೂರ ಗ್ರಾಮದ ಆರಾಧ್ಯ ದೇವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದಲ್ಲಿ ಅಪಾರ ಭಕ್ತರು ಜೋಳದ ತೆನೆಯ ಅಕ್ಷತೆ ಅರ್ಪಿಸಿದರು
ಚಿಂಚೋಳಿ ತಾಲ್ಲೂಕು ಕುಪನೂರ ಗ್ರಾಮದ ಆರಾಧ್ಯ ದೇವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ನಂದಿಕೋಲು ಹಾಗೂ ಪಲ್ಲಕ್ಕಿ‌ಮೆರವಣಿಗೆಯಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.