ADVERTISEMENT

ವಾಡಿ ಪುರಸಭೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 16:22 IST
Last Updated 14 ಡಿಸೆಂಬರ್ 2023, 16:22 IST
ಹೈಕೋರ್ಟ್
ಹೈಕೋರ್ಟ್   

ವಾಡಿ (ಕಲಬುರಗಿ ಜಿಲ್ಲೆ): ಸ್ಥಳೀಯ ಪುರಸಭೆಯ 23 ವಾರ್ಡ್‌ಗಳಿಗೆ ಡಿ.27ರಂದು ನಿಗದಿಯಾಗಿದ್ದ ಚುನಾವಣೆಗೆ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಗುರುವಾರ ತಡೆಯಾಜ್ಞೆ ನೀಡಿದೆ.

2018ರಲ್ಲಿನ ಚುನಾವಣೆಗೆ ನಿಗದಿಯಾಗಿದ್ದ ಮೀಸಲಾತಿಯನ್ನು 2023ರ ಚುನಾವಣೆಗೂ ಮುಂದುವರೆಸಿರುವ ಚುನಾವಣೆ ಆಯೋಗದ ನಿರ್ಧಾರ ಪ್ರಶ್ನಿಸಿ ಚಿತ್ತಾಪುರ ನಿವಾಸಿ ಶೇಖ್ ಅಲ್ತಾಫ್ ಹೈಕೋರ್ಟ್‌ಗೆ ಡಿ.5ರಂದು ಮೇಲ್ಮನವಿ ಸಲ್ಲಿಸಿದ್ದರು.

23 ವಾರ್ಡುಗಳಿಗೆ ಕಳೆದ ಬಾರಿಯ ಮೀಸಲಾತಿಯನ್ನು ಮುಂದುವರೆಸಿದ್ದರಿಂದ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಉಂಟಾಗಿದ್ದು ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸಿ ಚುನಾವಣೆ ನಡೆಸಬೇಕು ಹಾಗೂ ಅಲ್ಲಿವರೆಗೂ ಚುನಾವಣೆಗೆ ತಡೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.

ADVERTISEMENT

ಅರ್ಜಿದಾರರ ಮನವಿ ಪುರಸ್ಕರಿಸಿದ ಪ್ರದೀಪ್‌ ಸಿಂಗ್ ಯೆರೂರ್ ಅವರಿದ್ದ ನ್ಯಾಯಪೀಠವು ಮುಂದಿನ ಆದೇಶದವರೆಗೂ ಚುನಾವಣೆ ಪ್ರಕ್ರಿಯೆ ಸಂಪೂರ್ಣ ನಿಲ್ಲಿಸುವಂತೆ ಆದೇಶಿಸಿದೆ.

ಡಿ.27ರಂದು ಚುನಾವಣೆ ನಿಗದಿಯಾಗಿತ್ತು. ನಾಮಪತ್ರ ಸಲ್ಲಿಕೆಗೆ ಡಿ.15 ಶುಕ್ರವಾರ ಅಂತಿಮ ದಿನವಾಗಿತ್ತು. ಅಂತಿಮ ದಿನದವರೆಗೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಯಾವುದೇ ನಾಮಪತ್ರಗಳು ಸಲ್ಲಿಸದೇ ಕಾದು ನೋಡುವ ತಂತ್ರ ಅನುಸರಿಸಿದ್ದವು. ಬಂಡಾಯ ಭೀತಿಯಿಂದ ಅಂತಿಮ ಕ್ಷಣದವರೆಗೂ ಗುಟ್ಟು ಬಿಟ್ಟುಕೊಡದಿರುವ ತಂತ್ರಕ್ಕೆ ಎರಡು ಪಕ್ಷಗಳು ಮೊರೆ ಹೋಗಿದ್ದವು. ಎರಡು ಪಕ್ಷಗಳಲ್ಲಿ ಪ್ರತಿ ವಾರ್ಡ್‌ಗೂ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದ್ದ ಮುಖಂಡರು ಶುಕ್ರವಾರ ಅಂತಿಮ ದಿನದಂದು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದವು.

ಈಗ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ಬಿದ್ದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.