ಕಲಬುರಗಿ: ನಗರದ ಗಂಜ್ ಪ್ರದೇಶದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬದಲಾಗಿ ಬೇರೆ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವುದರಿಂದ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಕೃಷಿ ಮಾರುಕಟ್ಟೆ ಅಧಿಕಾರಿಗಳು 13 ಅಂಗಡಿಗಳ ಬಾಡಿಗೆದಾರರಿಗೆ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ನ ಕಲಬುರಗಿ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಎಪಿಎಂಸಿ ಆವರಣದಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕಷ್ಟೇ ಅನುಮತಿ ನೀಡಬೇಕು. ಉಳಿದ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಎಪಿಎಂಸಿ ಅಧಿಕಾರಿಗಳು ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದ್ದರು.
ಏಕಾಏಕಿ ಅಂಗಡಿಗಳನ್ನು ತೆರವುಗೊಳಿಸಿದರೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಉತ್ಪನ್ನಗಳನ್ನು ತಂದಿರುವ ನಮಗೆ ಸಾಕಷ್ಟು ನಷ್ಟವಾಗುತ್ತದೆ. ಆದ್ದರಿಂದ ತೆರವು ನೋಟಿಸ್‌ಗೆ ತಡೆ ನೀಡಬೇಕು ಎಂದು ಎಪಿಎಂಸಿ ಆವರಣದಲ್ಲಿ ಅಂಗಡಿಗಳನ್ನು ಬಾಡಿಗೆಗೆ ಪಡೆದಿರುವ ಆರ್.ಕೆ. ಹೆಗ್ಗಾಣೆ ದಾಲ್ ಇಂಡಸ್ಟ್ರೀಸ್, ಆರ್.ಬಿ. ಪಾಟೀಲ ಟ್ರೇಡಿಂಗ್ ಕಂಪನಿ, ವೆಂಕಟೇಶ್ವರ ಟ್ರೇಡಿಂಗ್ ಕಂಪನಿ, ಗೋಯಲ್ ಟ್ರೇಡ್ ಸೆಂಟರ್, ಶ್ರೇಯಾ ಎಂಟರ್‌ಪ್ರೈಸಸ್, ತಿರುಮಲ ಮಾರ್ಕೆಟಿಂಗ್, ಗಂಗಾ ಡಿಸ್ಟ್ರಿಬ್ಯೂಟರ್ಸ್, ವಿಭಾ ಟ್ರೇಡರ್ಸ್, ಚೌಧರಿ ಟ್ರೇಡಿಂಗ್, ರಾಜಾರಾಂ ಟ್ರೇಡರ್ಸ್, ಜೈ ಶ್ರೀ ಬಾಲಾಜಿ ಟ್ರೇಡರ್ಸ್ ಹಾಗೂ ಹರಿ ಓಂ ಟ್ರೇಡರ್ಸ್ ಕಂಪನಿಗಳ ಮುಖ್ಯಸ್ಥರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರವಾಗಿ ವಕೀಲ ಗಣೇಶ ನಾಯ್ಕ ವಾದ ಮಂಡಿಸಿ ಎಪಿಎಂಸಿ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಈ ವಾದ ಪುರಸ್ಕರಿಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠವು ನೋಟಿಸ್ ಜಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಿತು.
ಎಪಿಎಂಸಿ ಆವರಣದಲ್ಲಿ ಎಂ.ಎಸ್. ಪಾಟೀಲ ಪ್ರತಿಭಟನೆ
ತೆರವು ವಿಳಂಬ ಖಂಡಿಸಿ ಮಳೆಯಲ್ಲೇ ಪ್ರತಿಭಟನೆ ಎಪಿಎಂಸಿ ಆವರಣದಲ್ಲಿರುವ ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಮಳಿಗೆಗಳನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಎಪಿಎಂಸಿ ಆವರಣದಲ್ಲಿ ಮಂಗಳವಾರ ಮಳೆಯಲ್ಲೇ ಏಕಾಂಗಿ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಎಪಿಎಂಸಿ ಅಧಿಕಾರಿಗಳು 13 ಅಂಗಡಿಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಉಳಿದ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಪೊಲೀಸರ ಭದ್ರತೆಯಲ್ಲಿ ಅಂಗಡಿಗಳನ್ನು ತೆರವುಗೊಳಿಸಿ ಕೀಲಿ ಹಾಕಲಾಗುವುದು’ ಎಂದು ಭರವಸೆ ನೀಡಿದರು. ನಂತರ ನರಿಬೋಳ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇನ್ನೂ 56 ಅಂಗಡಿಕಾರರ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಅಂತಿಮ ತೀರ್ಪು ಹೊರಬರುವವರೆಗೆ ಯಾವುದೇ ರೀತಿಯ ತೆರವು ಕ್ರಮಗಳನ್ನು ಕೈಗೊಳ್ಳದಂತೆ ಸೂಚಿಸಬೇಕುಶರಣಬಸಪ್ಪ ಎಂ. ಪಪ್ಪಾ, ಕೆಕೆಸಿಸಿಐ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.