ADVERTISEMENT

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಬೇಸರ

ಹೈಕೋರ್ಟ್‌ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ನ್ಯಾಯಮೂರ್ತಿ ಎಸ್‌.ಸುಜಾತಾ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 12:05 IST
Last Updated 15 ಆಗಸ್ಟ್ 2019, 12:05 IST
ಕಲಬುರ್ಗಿ ಹೈಕೋರ್ಟ್‌ ಪೀಠದ ಹಿರಿಯ ನ್ಯಾಯಮೂರ್ತಿ ಎಸ್‌.ಸುಜಾತಾ ಅವರು ಧ್ವಜಾರೋಹಣ ನೆರವೇರಿಸಿ ಧ್ವಜಕ್ಕೆ ಗೌರವ ಸಲ್ಲಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ ಇದ್ದರು
ಕಲಬುರ್ಗಿ ಹೈಕೋರ್ಟ್‌ ಪೀಠದ ಹಿರಿಯ ನ್ಯಾಯಮೂರ್ತಿ ಎಸ್‌.ಸುಜಾತಾ ಅವರು ಧ್ವಜಾರೋಹಣ ನೆರವೇರಿಸಿ ಧ್ವಜಕ್ಕೆ ಗೌರವ ಸಲ್ಲಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ ಇದ್ದರು   

ಕಲಬುರ್ಗಿ: ‘ಕ್ಷಿಪ್ರಗತಿಯಲ್ಲಿ ಭಾರತವು ಅಭಿವೃದ್ಧಿ ಹೊಂದುತ್ತಿದ್ದರೂ ದೇಶದಲ್ಲಿ ದಿನನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಭ್ರಷ್ಟಾಚಾರ, ಜಾತೀಯತೆ ತಾಂಡಾವಾಡುತ್ತಿರುವುದು ತುಂಬಾ ಖೇದಕರ. ಇದನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಪಣತೊಡಬೇಕಾಗಿದೆ’ ಎಂದು ಕಲಬುರ್ಗಿ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎಸ್‌.ಸುಜಾತಾ ಅವರು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹೈಕೋರ್ಟ್‌ ಆವರಣದಲ್ಲಿ ಗುರುವಾರ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ‘ಕೇವಲ ಕಾನೂನು, ಕಾಯ್ದೆಗಳಿಂದ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಬದಲಾಗಿ ನಮ್ಮೆಲ್ಲರ ಮನ–ಮನೆಯಲ್ಲಿ ಪರಿವರ್ತನೆಯಾಗಬೇಕಿದೆ’ ಎಂದರು.

‘ಪ್ರಕೃತಿ ವಿಕೋಪದಿಂದ ರಾಜ್ಯದ ಅನ್ನದಾತ ರೈತ ಸಮುದಾಯ ಪ್ರವಾಹಕ್ಕೆ ಸಿಲುಕಿ ಬದುಕಿನ ಭರವಸೆಯನ್ನೆ ಕಳೆದುಕೊಂಡಿದ್ದಾನೆ. ನಾವೆಲ್ಲರೂ ಅವರ ಸಂಕಷ್ಡದಲ್ಲಿ ಭಾಗಿಯಾಗಬೇಕಿದೆ. ಸಂಕಷ್ಟದಲ್ಲಿರುವ ರೈತನ ನೆರವಿಗೆ ಎಲ್ಲರೂ ಧಾವಿಸಬೇಕು’ ಎಂದು ಕರೆ ನೀಡಿದರು.

ADVERTISEMENT

‘ಜಾತಿ, ಮತ, ಪಂಥವನ್ನು ಬದಿಗಿಟ್ಟು ಜಾತ್ಯತೀತತೆಯನ್ನು ಎತ್ತಿ ಹಿಡಿಯುವ ದೇಶಭಕ್ತಿಯೇ ನಮ್ಮೆಲ್ಲರ ಧರ್ಮವಾಗಬೇಕು. ಈ ಧರ್ಮಕ್ಕೆ ಸಂವಿಧಾನವೇ ಮೂಲ ಧರ್ಮಗ್ರಂಥವಾಗಿದ್ದು, ಅದನ್ನು ನಾವೆಲ್ಲರೂ ಪಾಲಿಸಬೇಕು’ ಎಂದರು.

‘ದೇಶದ ಸಂಸ್ಕೃತಿಯಲ್ಲಿ ಮಾತೃದೇವೋಭವ ಮತ್ತು ಪಿತೃ ದೇವೋಭವಕ್ಕೆ ಗೌರವದ ಸ್ಥಾನ ನೀಡಲಾಗಿದೆ. ಅದರ ಜೊತೆಗೆ ರಾಷ್ಟ್ರದೇವೋಭವವನ್ನು ನಾವು ಸೇರಿಸಿಕೊಳ್ಳಬೇಕಿದೆ. ಹಲವಾರು ಸ್ವಾತಂತ್ರ ಹೋರಾಟಗಾರರ, ದೇಶ ಭಕ್ತರ ನಿರಂತರ ಹೋರಾಟ, ತ್ಯಾಗ ಬಲಿದಾನದ ಫಲವಾಗಿ ಪರಕೀಯರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರಕ್ಕಾಗಿ ಹೋರಾಡಿದ ಅ ಎಲ್ಲಾ ಅದಮ್ಯ ಚೇತನಗಳಿಗೆ ನಮ್ಮ ನಮನ ಸಲ್ಲಿಸೋಣ. ನಾವೆಲ್ಲರೂ ಇಲ್ಲಿ ಸ್ವಚ್ಛಂದ ಗಾಳಿಯಲ್ಲಿ ಹಕ್ಕಿಯಂತೆ ಜೀವಿಸುತ್ತಿದ್ದೇವೆ ಅಂದರೆ ಗಡಿಯಲ್ಲಿ ದೇಶದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ನಮ್ಮ ಯೋಧರು ಕಾರಣರಾಗಿದ್ದಾರೆ. ದೇಶಭಕ್ತರಾದ ನಾವು ಅವರನ್ನು ಸ್ಮರಿಸುವುದು ಅಗತ್ಯವಿದೆ’ ಎಂದು ಹೇಳಿದರು.

ಭೂಮಿಯಲ್ಲಿನ ಪ್ರತಿ ಜೀವಿ, ಜಲಚರಗಳು, ಪಶು–ಪ್ರಾಣಿಗಳುಮುಕ್ತ ಸ್ವಾತಂತ್ರ್ಯ ಬಯಸುತ್ತವೆ. ಇನ್ನು ಬುದ್ಧಿವಂತ ಮಾನವ ಜೀವಿ ಸಹಜವಾಗಿ ಹೆಚ್ಚು ಬಯಸುತ್ತಾನೆ. ಮೂಲಭೂತ ಹಕ್ಕಿಗಾಗಿ ಹೇಗೆ ಹೋರಾಡುತ್ತೇವೋ ಹಾಗೆಯೇ ಮೂಲ ಕರ್ತವ್ಯ ಪಾಲನೆಯಲ್ಲಿಯೂ ಮುಂದೆ ಸಾಗಬೇಕಿದೆ ಎಂದರು.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಸ್.ಮುದಗಲ್, ಎನ್‌.ಕೆ.ಸುಧೀಂದ್ರರಾವ್, ಕಲಬುರ್ಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಪ್ರಭಾರ ನ್ಯಾಯಾಧೀಶ ಶುಕಲಾಕ್ಷ ಪಾಲನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ವಕೀಲರ ಸಂಘದ ಹೈಕೋರ್ಟ್ ಘಟಕದ ಉಪಾಧ್ಯಕ್ಷ ಸುಧೀರ ಸಿಂಗ್, ಪ್ರಧಾನ ಕಾರ್ಯದರ್ಶಿ ಬಿ.ಸಿ.ಜಾಕಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹೈಕೋರ್ಟಿನ ವಕೀಲರು, ಸಿಬ್ಬಂದಿ ಇದ್ದರು.

ಹೈಕೋರ್ಟ್ ಆವರಣದಲ್ಲಿ ನ್ಯಾಯಮೂರ್ತಿಗಳು ಸಸಿ ನೆಟ್ಟು ನೀರುಣಿಸಿದರು. ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಹೈಕೋರ್ಟ್ ಪೀಠದ ವಕೀಲರು ಮತ್ತು ಸಿಬ್ಬಂದಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನ್ಯಾಯಮೂರ್ತಿಗಳು ಪ್ರಶಸ್ತಿ ಪತ್ರ, ಪದಕಗಳನ್ನು ವಿತರಿಸಿದರು. ವಕೀಲರಾದ ಐಶ್ವರ್ಯ ಉಪಳಾಂವಕರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.