ADVERTISEMENT

ಹಿಂದೂ ಧರ್ಮ ಶಾಂತಿಯ ಸಂಕೇತ: ಚಕ್ರವರ್ತಿ ಸೂಲಿಬೆಲೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 6:59 IST
Last Updated 24 ಫೆಬ್ರುವರಿ 2025, 6:59 IST
ಚಿಂಚೋಳಿ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಯುವಕ ಸಂಘದ ದಶಮಾನೋತ್ಸವ ಹಾಗೂ ಶಿವಾಜಿ ಮಹಾರಾಜರ 395ನೇ ಜಯಂತ್ಯುತ್ಸವದಲ್ಲಿ ಭಾನುವಾರ ಚಕ್ರವರ್ತಿ ಸೂಲಿಬೆಲೆ ಜ್ಯೋತಿ ಬೆಳಗಿದರು
ಚಿಂಚೋಳಿ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಯುವಕ ಸಂಘದ ದಶಮಾನೋತ್ಸವ ಹಾಗೂ ಶಿವಾಜಿ ಮಹಾರಾಜರ 395ನೇ ಜಯಂತ್ಯುತ್ಸವದಲ್ಲಿ ಭಾನುವಾರ ಚಕ್ರವರ್ತಿ ಸೂಲಿಬೆಲೆ ಜ್ಯೋತಿ ಬೆಳಗಿದರು   

ಚಿಂಚೋಳಿ: ‘ಹಿಂದೂ ಧರ್ಮ ಎಂದರೆ ಶಾಂತಿ, ಇಸ್ಲಾಂ ಧರ್ಮ ಎಂದರೆ ಯುದ್ಧ. ಹಿಂದೂ ಧರ್ಮದ ಚರಿತ್ರೆ ಓದಿದರೆ ನಿಮಗೆ ಗೊತ್ತಾಗುತ್ತದೆ. ಅದು ಶಾಂತಿಯನ್ನೇ ಜಗತ್ತಿಗೆ ಸಾರಿದೆ. ಆದರೆ ಇಸ್ಲಾಂ ಧರ್ಮದ ಸ್ಥಾಪನೆ ಹಿಡಿದು ಬೆಳೆದು ಬಂದ ದಾರಿ ಓದಿದರೆ ಅದು ಯುದ್ಧವನ್ನೇ ಸಾರಿದೆ’ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಯುವಕ ಸಂಘ ಹಮ್ಮಿಕೊಂಡ ಶಿವಾಜಿ ಮಹಾರಾಜರ 395ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ‘ಶಿವಾಜಿ ಮಹಾರಾಜ ಹಿಂದೂ ಯುಗದ ಪ್ರವರ್ತಕ. ಮೊಘಲರ ವಿರುದ್ಧ ಹಿಂದೂಗಳು ಸೋಲಲಿಕ್ಕೆ ಹುಟ್ಟಿದವರೇ ಎಂಬುದು ಸುಳ್ಳಾಗಿಸಿ ಹಿಂದೂಗಳೆಂದರೆ ಕಟ್ಟ ಕಡೆಗೆ ಗೆಲ್ಲುವವರು ಎಂಬುದನ್ನು ತೋರಿಸಿಕೊಟ್ಟ ಪ್ರಚಂಡ ಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜರು’ ಎಂದರು.

‘ಭಾರತದ ಮೇಲೆ ದಾಳಿ ಮಾಡಿದ ಮಹಮದ್ ಬಿನ್ ಖಾಸಿಂ ಅತ್ಯಂತ ಪ್ರಾಚೀನ ಸೂರ್ಯ ಮಂದಿರ ದೋಚಿದ ನಂತರ ಹಿಂದೂ ದೊರೆಗಳನ್ನು ಕೊಂದು ಹಾಕಿದ. ಆದರೆ ದೇವಾಲಯ ಹಾಗೆಯೇ ಉಳಿಸಿದ್ದನು. ಹಿಂದೂಗಳು ದೇವಾಲಯಕ್ಕೆ ನಿತ್ಯ ಬಂದು ಹುಂಡಿಗೆ ಹಾಕುವ ಹಣ ದೋಚುವ ಹುನ್ನಾರವಿತ್ತು. ಈಗ ಸಿದ್ಧರಾಮಯ್ಯನವರು ಇದೇ ಹುನ್ನಾರ ನಡೆಸಿ ಹಿಂದೂ ದೇವಾಲಯಗಳ ಆದಾಯದ ಹಣ ಅನ್ಯ ಧರ್ಮಗಳ ಜನರ ಏಳ್ಗೆಗೆ ಬಳಸುತ್ತಿದ್ದಾರೆ’ ಎಂದರು.

ADVERTISEMENT

ಖರ್ಗೆದ್ವಯರ ಬಗ್ಗೆ ವ್ಯಂಗ್ಯ: ಮಲ್ಲಿಕಾರ್ಜುನ ಖರ್ಗೆ ಗಂಗೆಯಲ್ಲಿ ಮುಳುಗಿದರೆ ಬಡತನ ಹೋಗುತ್ತಾ ಎಂದು ಕೇಳಿದರೆ, ಪ್ರಿಯಾಂಕ್ ಖರ್ಗೆ ಪಾಪ ಹೋಗುತ್ತಾ ಎಂದು ಪ್ರಶ್ನಿಸಿದ್ದಾರೆ. ಆದರೆ ಖರ್ಗೆ ಅವರು ಕೇಳಿದ್ದು ದೇಶದ ಹಿಂದುಗಳಿಗಲ್ಲ. ಬದಲಾಗಿ ಗಂಗೆಯಲ್ಲಿ ಮಿಂದೆದ್ದ ಮಹಾತ್ಮ ಗಾಂಧೀಜಿ, ಪಂಡಿತ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಎಂದು ಛೇಡಿಸಿದರು. ಇವರೆಲ್ಲರೂ ದೇಶಕ್ಕೆ ಬಗೆದ ದ್ರೋಹದ ಪಾಪವನ್ನು ತೊಳೆದುಕೊಂಡರೆ ಎಂದು ಕೇಳಿದ್ದಾರೆ. ಸ್ವತಃ ಖರ್ಗೆ ಅವರೇ ದಂಪತಿ ಸಮೇತ ಯಾದಗಿರಿ ಬಳಿ ನದಿಯಲ್ಲಿ ಮುಳುಗಿ ತಮ್ಮ ಬಡತನ ಕಳೆದುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಐನಾಪುರದ ಸಿದ್ದಲಿಂಗೇಶ್ವರ ಹಿರೇಮಠದ ಪಂಚಾಕ್ಷರಿ ದೇವರು ಮಾತನಾಡಿ, ‘ಮಕ್ಕಳನ್ನು ಹೇಗೆ ಬೆಳೆಸಬೇಕು. ಅವರಿಗೆ ಎಂತಹ ಸಂಸ್ಕಾರ ನೀಡಬೇಕು ಎಂಬುದರ ಕುರಿತು ಜೀಜಾಬಾಯಿಯನ್ನು ನೋಡಿ ಕಲಿಯಬೇಕು. ಎಲ್ಲಾ ತಾಯಂದಿರು ಜೀಜಾಬಾಯಿ ಆದರೆ ಪ್ರತಿಯಲ್ಲಿ ಶಿವಾಜಿ ಜನ್ಮ ತಳೆಯುತ್ತಾರೆ’ ಎಂದರು.

ಸಂಘದ ಅಧ್ಯಕ್ಷ ವಸಂತ ಇಟಗಿ ಅಧ್ಯಕ್ಷತೆ ವಹಿಸಿದ್ದರು. ನರನಾಳ ಹಿರೇಮಠದ ಶಿವಕುಮಾರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಡಾ.ಬಸವೇಶ ವೈಜನಾಥ ಪಾಟೀಲ, ಬಕ್ಕಪ್ಪ ಸೋಮಲಿಂಗದಳ್ಳಿ, ನಿವೃತ್ತ ಶುಷ್ರೂಷಕಿ ರತ್ನಮ್ಮ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ದಾಸೋಹ ಸೇವೆ ಸಲ್ಲಿಸಿದ ಅಶೋಕ ಮೊಗದಂಪುರ, ಸಂತೋಷ ಗಡಂತಿ, ಬಸವರಾಜ ಮೋತಕಪಳ್ಳಿ, ವೀರೇಶ ಯಂಪಳ್ಳಿ, ಕಿರಣ ಮಾನೆ ಅವರನ್ನು ಸನ್ಮಾನಿಸಲಾಯಿತು.

ಕಿರಣ ಪಂಚಾಳ ಪ್ರಸ್ತಾವಿಕ ಮಾತನಾಡಿದರು. ಸುನೀಲ ಮನ್ನಳ್ಳಿ ಸ್ವಾಗತಿಸಿದರು. ಶಿವರುದ್ರಯ್ಯ ಸ್ವಾಮಿ ನಿರೂಪಿಸಿದರು. ಲೋಕೇಶ ಶೆಳ್ಳಗಿ ವಂದಿಸಿದರು.

Cut-off box - 40 ಸಾವಿರ ಹಿಂದೂ ದೇವಾಲಯಗಳು ಮಸೀದಿಗಳಾಗಿವೆ ಯಾದಗಿರಿಯಲ್ಲಿ ಖರ್ಗೆ ಅವರಿಂದಲೂ ನದಿಯಲ್ಲಿ ಸ್ನಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.