ಕಲಬುರಗಿ: ಸೇಡಂ ತಾಲ್ಲೂಕಿನ ಇಂದಿನ ‘ಮಳಖೇಡ’, ಅಂದಿನ ‘ಮಾನ್ಯಖೇಟ’ ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಊರು. ಮಾನ್ಯಖೇಟ ಸುಮಾರು ಹತ್ತು ಮೈಲು ವಿಸ್ತೀರ್ಣದಲ್ಲಿ ವ್ಯಾಪಿಸಿತ್ತು. ಆದರೀಗ ಗ್ರಾಮ ಪಂಚಾಯಿತಿಗೆ ಸೀಮಿತವಾಗಿದೆ.
ಬಾದಾಮಿ ಚಾಲುಕ್ಯರನ್ನು ಸೋಲಿಸಿ ಕ್ರಿ.ಶ. 753ರಲ್ಲಿ ಸ್ವತಂತ್ರ ಸಾಮ್ರಾಜ್ಯ ಸ್ಥಾಪಿಸಿದವರು ರಾಷ್ಟ್ರಕೂಟರು. ಬರೋಬ್ಬರಿ 220 ವರ್ಷಗಳ ಕಾಲ ಕರುನಾಡಿನ ಕೀರ್ತಿಯನ್ನು ದೇಶದ ಮೂಲೆ ಮೂಲೆಗೂ ಪಸರಿಸಿದ್ದರು. ಆದರೀಗ ಒಂದು ಸಣ್ಣ ಮಳೆ ಬಂದರೂ ಸಾಕು, ಈ ಬೃಹತ್ ಕೋಟೆ ಧರಾಶಾಹಿಯಾಗುತ್ತಿದೆ. ಆದರೆ, ಕುಸಿಯುತ್ತಿರುವುದು ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ಕೋಟೆಯಲ್ಲ; 2018ರಲ್ಲಿ ಸುಮಾರು ₹5ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿದ ಕೋಟೆ!
ಈಗ ಮತ್ತೆ ಕೋಟೆಯ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬಾದಾಮಿ ಚಾಲುಕ್ಯರನ್ನು ಸೋಲಿಸಿ ಅಧಿಕಾರಕ್ಕೆ ಬಂದವರು ರಾಷ್ಟ್ರಕೂಟರು. ಆದರೀಗಿ ಚಾಲುಕ್ಯರ ನಾಡಿನಿಂದ ಬಂದವರೇ ಮತ್ತೆ ಕೋಟೆ ಕಟ್ಟುವಲ್ಲಿ ನಿರತರಾಗಿದ್ದಾರೆ. ಬಾದಾಮಿ ತಾಲ್ಲೂಕು ನಂದಿಕೇಶ್ವರ ಗ್ರಾಮದವರು ಕೋಟೆಯ ಮರುನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.
ಅಮೋಘವರ್ಷ ಕನ್ನಡನಾಡಿನ ಚಿನ್ನದ ರಾಜ ಎಂದು ಹೆಸರಾಗಿದ್ದಾರೆ. ಆತನ ಸಾಮ್ರಾಜ್ಯ 16 ಪ್ರಾಂತ್ಯಗಳನ್ನು ಹೊಂದಿತ್ತು. ರಾಜಧಾನಿ ಮಳಖೇಡ ನಾಲ್ಕು ಅಗಸಿ, 52 ಬುರುಜುಗಳನ್ನುಳ್ಳ ಕೋಟೆಯಾಗಿತ್ತು. ‘ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್’ ಎಂದು ಕವಿರಾಜಮಾರ್ಗದಲ್ಲಿ ಶ್ರೀವಿಜಯ ಕನ್ನಡ ನಾಡಿನ ವಿಸ್ತೀರ್ಣತೆ ಹೇಳಿದ್ದಾರೆ. ‘ರಾಜಧಾನಿ ಮಾನ್ಯಖೇಟ ಇಂದ್ರನ ರಾಜಧಾನಿ ಅಮರಾವತಿಯನ್ನೇ ಮೀರಿಸುವಂತಿತ್ತು’ ಎಂದೂ ವರ್ಣಿಸಿದ್ದಾರೆ. ಆದರೆ, ಇಂದು ಹೀನಾಯ ಸ್ಥಿತಿಯಲ್ಲಿದೆ. ಪರಿಣಾಮ ಪ್ರವಾಸಿಗರು ವಿಮುಖರಾಗುತ್ತಿದ್ದಾರೆ. ಸ್ಮಾರಕಗಳೆಲ್ಲಾ ಮುಳ್ಳು ಕಂಟಿಗಳ ನಡುವೆ ಮುಚ್ಚಿಹೋಗಿವೆ.
ಈಗಲೂ ಕಾಗಿಣಾ ನದಿ ಶಾಂತವಾಗಿ ಪ್ರವಹಿಸುತ್ತಿದೆ. ಅದರ ತಟದಲ್ಲೇ ಉತ್ತರಾದಿ ಮಠ ಸ್ಥಾಪಿತವಾಗಿದೆ. ಮಾನ್ಯಖೇಟ ಸುಮಾರು ಇನ್ನೂರು ವರ್ಷ ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದಿದೆ. ಕನ್ನಡದ ಪ್ರಥಮ ಗ್ರಂಥ ಕವಿರಾಜಮಾರ್ಗ ನೀಡಿದ ಖ್ಯಾತಿ ಕೂಡ ಈ ನೆಲಕ್ಕಿದೆ. ಅಂತಹ ವೈಭವಯುತ ಸ್ಥಳಕ್ಕೆ ಮಾತ್ರ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ.
ಕೋಟೆ ಸಂಪೂರ್ಣ ಹಾಳಾಗಿದೆ. ಇದು ಗ್ರಾಮಸ್ಥರಿಗೆ ನೋವು ತಂದಿದೆ. ಪ್ರವಾಸಿಗರು ಬಂದು ವಾಪಸ್ ಹೋಗುವಂತಾಗಿದೆ. ಸಂಬಂಧಿಸಿದ ಇಲಾಖೆ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕುರಾಚಯ್ಯಸ್ವಾಮಿ ಸ್ಥಳೀಯರು
ಚಾಲುಕ್ಯರ ರಾಜಧಾನಿ ಬಾದಾಮಿಯಿಂದ ನಾವು ಬಂದಿದ್ದೇವೆ. ರಾಷ್ಟ್ರಕೂಟರ ರಾಜಧಾನಿಯಾಗಿರುವ ಮಳಖೇಡ ಕೋಟೆಯ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದೇವೆಮಾಗುಂಡಪ್ಪ ಕಟಗೇರಿ ಬಾದಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.