
ಕಲಬುರಗಿ: ಶರಣರ ಜನಪದ ಹಾಡು, ವಚನ ನೃತ್ಯ, ವಚನ ಗಾಯನ, ವಚನ ಅಂತ್ಯಾಕ್ಷರಿ, ‘ಸೊನ್ನಲಗಿ ಸಿದ್ದರಾಮ’ ರೂಪಕ, ಮಹಾಕ್ರಾಂತಿ ನಾಟಕ... ಇಂಥ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಮಹಾದೇವಿಯಕ್ಕಗಳ ಸಮ್ಮೇಳನ ಭಾನುವಾರ ತೆರೆಕಂಡಿತು.
ಜಯನಗರದ ಅನುಭವ ಮಂಟಪದಲ್ಲಿ ಷಟಸ್ಥಳ ಧ್ವಜಾರೋಹಣದೊಂದಿಗೆ ಎರಡು ದಿನಗಳ ಸಮ್ಮೇಳನ ಶುರುವಾಗಿತ್ತು. ಐದು ಗೋಷ್ಠಿಗಳು, ಆರು ಸಾಂಸ್ಕೃತಿಕ ಕಾರ್ಯಕ್ರಮಗಳು, ಎರಡು ವಿಶೇಷ ಉಪನ್ಯಾಸಗಳು ನಡೆದವು.
ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ ಅವರಿಗೆ 2025ನೇ ಸಾಲಿನ ‘ಡಾ.ಬಿ.ಡಿ.ಜತ್ತಿ. ವೈರಾಗ್ಯನಿಧಿ ಅಕ್ಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಲೀಲಾದೇವಿ, ‘ಯಾವುದೇ ಸನ್ಮಾನ ಬದುಕಿಗೆ ಹೆಜ್ಜೆಗುರುತು. ಸನ್ಮಾನ ಎಂದರೆ ಶಾಲು ಹೊತ್ತು ಹೂವಿನ ಹಾರ ಹಾಕಿಕೊಳ್ಳುವುದಲ್ಲ; ನನ್ನ ಪಾಲಿಗೆ ಅದೊಂದು ಎಚ್ಚರಿಕೆಯ ಗಂಟೆಯೂ ಹೌದು’ ಎಂದರು.
‘ನನಗೆ ಬದುಕಿನಲ್ಲಿ ಅನೇಕ ಸನ್ಮಾನಗಳು ಸಂದಿವೆ. ಆಗೆಲ್ಲ ನಾನೊಂದು ಚಿಂತನೆ ಮಾಡುತ್ತಿದ್ದೆ. ಈ ಸನ್ಮಾನ ಯಾಕೆ ಮಾಡಿದ್ದಾರೆ? ಬಹುಶಃ ನನ್ನ ಮುಂದಿನ ಬದುಕಿನಲ್ಲಿ ಸತ್ಯದಿಂದ ಸಮಾಜ ಸೇವೆ ಮಾಡಲಿ ಎಂಬ ಎಚ್ಚರಿಕೆಯಾಗಿ ಮಾಡಿದ್ದಾರೆ ಎಂದುಕೊಳ್ಳುತ್ತಿದ್ದೆ. ಅದುವೇ ಸನ್ಮಾನದ ನಿಜವರ್ಥ’ ಎಂದರು.
‘ಈ ಸನ್ಮಾನದಲ್ಲಿ ಗುಲಾಬಿ ದಳಗಳವೃಷ್ಟಿ ಮಾಡುತ್ತಾರೆ. ಆ ಗುಲಾಬಿ ಹೂವಿನ ಕೆಳಗೆ ಮುಳ್ಳು ಇರುತ್ತದೆ. ಹೀಗಾಗಿ ಗುಲಾಬಿ ಹೂವಿಗೂ ಮಹಿಳೆಯರ ಬದುಕಿಗೂ ಸಾಮ್ಯತೆಯಿದೆ. ನಾವೆಲ್ಲ ಗುಲಾಬಿ ಹೂವಿನ ತರಹ ಬದುಕಬೇಕಿದೆ. ಮುಳ್ಳು ಚುಚ್ಚುವ ಅಳುಕೇನೂ ಬೇಡ. ಆ ಮುಳ್ಳಿನೊಂದಿಗೆ ಜಾಗೃತೆಯಿಂದ ಬದುಕು’ ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಪ್ರದಾನಕ್ಕೂ ಮುನ್ನ ವಿವಿಧ ಕಾಯಕ ಸಮುದಾಯದ ರೇಖಾ ಪಾಟೀಲ, ರೇಖಾ ತೆಲ್ಲೂರ, ಅಂಬವ್ವ ಮಡಿವಾಳ ಅವರಿಗೆ ಶಾಲು ಹೊದಿಸಿ ವಿಶೇಷವಾಗಿ ಸನ್ಮಾನಿಸಲಾಯಿತು. ಸಮ್ಮೇಳನದ ಅಧ್ಯಕ್ಷೆ ಪುಷ್ಪಾ ವಾಲಿ ಅವರಿಗೆ ವೈರಾಗ್ಯನಿಧಿ ಅಕ್ಕ ಮಹಾದೇವಿ ಮೂರ್ತಿ ನೀಡಿ ಗೌರವಿಸಲಾಯಿತು.
ಪ್ರೊ. ಸುಲೇಖಾ ಮಾಲಿಪಾಟೀಲ ಸಮಾರೋಪ ನುಡಿಗಳನ್ನಾಡಿದರು. ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಕಾರ್ಯಾಧ್ಯಕ್ಷೆ ಜಯಶ್ರೀ ದಂಡೆ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಭವಾನಿ ಚಟ್ನಳ್ಳಿ, ಭಾಗ್ಯಜ್ಯೋತಿ ನಿರ್ವಹಿಸಿದರು.
ಗಮನ ಸೆಳೆದ ‘ಸಂಸ್ಕಾರ’ ಗೋಷ್ಠಿಗಳು
‘ಅರ್ಚನೆ ಪೂಜೆ ನೇಮವಲ್ಲ. ಅದು ಮಾತ್ರವೇ ಧಾರ್ಮಿಕ ಸಂಸ್ಕಾರ ಆಗುವುದಿಲ್ಲ. ಸಮರಸ ಸ್ಥಿತಿ ಪಡೆಯುವುದೇ ನಿಜವಾದ ಧಾರ್ಮಿಕ ಸಂಸ್ಕಾರ’ ಎಂದು ಸಂಪನ್ಮೂಲ ವ್ಯಕ್ತಿ ಸುನಿತಾ ಗುಮ್ಮಾ ಹೇಳಿದರು. ಸಮ್ಮೇಳನದಲ್ಲಿ ‘ಶರಣೆಯರ ವಚನಗಳಲ್ಲಿ ಸಂಸ್ಕಾರ’ ಗೋಷ್ಠಿಯಲ್ಲಿ ಧಾರ್ಮಿಕ ಸಂಸ್ಕಾರ ಕುರಿತು ಮಾತನಾಡಿದರು. ‘ಕೇವಲ ಕೆಲವರ ಮತ್ತು ಪುರುಷರ ಸ್ವತ್ತಾಗಿದ್ದ ಧಾರ್ಮಿಕ ಸ್ವಾತಂತ್ರ್ಯವನ್ನು ಮಹಿಳೆಯರಿಗೂ ತಂದುಕೊಟ್ಟ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ’ ಎಂದರು. ‘ಅಧ್ಯಾತ್ಮ ಸಂಸ್ಕಾರ’ದ ಕುರಿತು ಮಾತನಾಡಿದ ಚಂದ್ರಕಲಾ ಬಿದರಿ ‘ಮನುಷ್ಯನನ್ನು ಮಹಾದೇವನನ್ನಾಗಿ ಮಾಡುವ ನರನನ್ನು ಹರನನ್ನಾಗಿ ಮಾಡುವುದೇ ಸಂಸ್ಕಾರ. ಆರು ನಾನೆಂದು ವಿಚಾರಿಸುವುದೇ ಅಧ್ಯಾತ್ಮ. ‘ಸತಿಪತಿಗಳೊಂದಾದ ಭಕ್ತಿ ಹಿತವಪ್ಪುವುದು ಶಿವಂಗೆ’ ವಚನದಲ್ಲಿ ಅಧ್ಯಾತ್ಮ ಕಾಣಬಹುದು. ಕೇವಲ ವ್ರತ ನೇಮ ಆಚರಿಸುವುದು ಅಧ್ಯಾತ್ಮ ಅಲ್ಲ. ಆತ್ಮಶುದ್ಧಿ ಮಾಡಿಕೊಳ್ಳುವುದು ಅಧ್ಯಾತ್ಮ’ ಎಂದರು. ‘ಕೌಟುಂಬಿಕ ಸಂಸ್ಕಾರ’ ಕುರಿತು ಮಾತನಾಡಿದ ಮೀನಾಕುಮಾರಿ ಪಾಟೀಲ ‘ಪರಲೋಕಕ್ಕಿಂತ ಇಹಲೋಕಕ್ಕೆ ಶರಣರು ಹೆಚ್ಚಿನ ಪ್ರಾಶಸ್ತ್ಯ ಕೊಟ್ಟರು. ಈಸಬೇಕು ಇದ್ದು ಜಯಿಸಬೇಕು. ದಯೆ ಪ್ರೀತಿ ಕರುಣೆ ಮುಂತಾದ ಮಾನವೀಯ ಮೌಲ್ಯಗಳ ಬಗ್ಗೆ ಕುಟುಂಬದಲ್ಲಿ ಸಂಸ್ಕಾರ ನೀಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.