
ಆಳಂದ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಕರ್ನಾಟಕ ಆಹಾರ ಆಯೋಗದ ಸದಸ್ಯ ಸುಮಂತ್ ರಾವ ಅವರು, ಅಲ್ಲಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ ನೀಡುವ ವ್ಯವಸ್ಥೆ, ಕ್ಯಾಂಟೀನ್ ಹಾಗೂ ಅಡುಗೆ ಕೋಣೆ ಪರಿಶೀಲನೆ ನಡೆಸಿ, ರೋಗಿಗಳಿಂದ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆ ಮತ್ತು ಕ್ಯಾಂಟೀನ್‌ನಲ್ಲಿ ಬಾಣಂತಿಯರು ಹಾಗೂ ರೋಗಿಗಳಿಗೆ ನೀಡುವ ಊಟ, ತಿಂಡಿ ತಿನಿಸುಗಳ ಮೆನ್ಯು ಹಾಕದ ಸಿಬ್ಬಂದಿಗೆ ತಾಕೀತು ಮಾಡಿದ್ದರು. ಅಲ್ಲದೇ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ನೀಡುವ ಆಹಾರದ ಕುರಿತು ರಿಜಿಸ್ಟಾರ್‌ನಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿದ್ದ ವ್ಯವಸ್ಥೆ ಹಾಗೂ ಸೇವೆಗಳ ಕುರಿತು ಅಲ್ಲಿದ್ದ ರೋಗಿಗಳಿಗೆ ವಿಚಾರಿಸಿದಾಗ; ರೋಗಿಗಳು ಉತ್ತಮ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದಲ್ಲದೇ ಆಸ್ಪತ್ರೆಗೆ ಬಸ್ ವ್ಯವಸ್ಥೆ ಇಲ್ಲದ್ದರ ಬಗ್ಗೆ ಅಳಲು ತೊಡಿಕೊಂಡರು.
ವೈದ್ಯರಾದ ಪ್ರಮೋದ, ಫರ್ವಿನಾ ಬೇಗಂ, ರಾಜಶ್ರೀ ಹಾಗೂ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕಾಧಿಕಾರಿ ವಿಜಯಲಕ್ಷ್ಮಿ ಹೋಳ್ಕರ್ ಉಪಸ್ಥಿತರಿದ್ದರು.
ವಸತಿನಿಲಯಗಳಿಗೆ ಭೇಟಿ: ಪಟ್ಟಣದಲ್ಲಿನ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ವಿವಿಧ ವಸತಿ ನಿಲಯಗಳಿಗೂ ಭೇಟಿ ನೀಡಿದ ಅವರು; ಅಲ್ಪಸಂಖ್ಯಾತ ವಸತಿ ನಿಲಯದ ಚರಂಡಿ, ಅಸ್ವಚ್ಛತೆ ಹಾಗೂ ರಸ್ತೆ ಕುರಿತು ಪುರಸಭೆ ಮುಖ್ಯಾಧಿಕಾರಿ ಗಮನಕ್ಕೆ ತರಲಾಯಿತು. ವಾರದಲ್ಲಿ ಸ್ವಚ್ಛತೆಗೊಳಿಸುವುದಾಗಿ ಸಂಗಮೇಶ ಪನಶೆಟ್ಟಿ ತಿಳಿಸಿದರು. ಹಳೆಯ ತಹಶೀಲ್ದಾರ್ ಕಚೇರಿ ಸಮೀಪದ ನ್ಯಾಯ ಬೆಲೆ ಅಂಗಡಿಯಲ್ಲಿ 6 ಕ್ವಿಂಟಾಲ್ ಅಕ್ಕಿ ಜಾಸ್ತಿ ಉಳಿಸಿಕೊಂಡಿದ್ದ ಮಾಲೀಕರಿಗೆ ತರಾಟೆಗೆ ತೆಗೆದುಕೊಂಡು ಅವರಿಗೆ ನೋಟಿಸ್ ನೀಡಿ, ಕ್ರಮಕ್ಕೆ ಆಹಾರ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.