ಜೇವರ್ಗಿ (ಕಲಬುರಗಿ ಜಿಲ್ಲೆ): ಜೇವರ್ಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೊರರೋಗಿ ವಿಭಾಗದ (ಒಪಿಡಿ) ದಾಖಲಾತಿ ಪುಸ್ತಕದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸಿನಿಮಾದ ಭಕ್ತಿಗೀತೆ, ದೇವರ ಸ್ತೋತ್ರಗಳನ್ನು ಬರೆದಿರುವುದು ಬುಧವಾರ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ವೇಳೆ ಗೊತ್ತಾಗಿದೆ.
ತಾಲ್ಲೂಕಿನ ಮಾರಡಗಿ ಎಸ್.ಎ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮಕ್ಕಳ ಆರೋಗ್ಯ ವಿಚಾರಿಸಲು ಲೋಕಾಯುಕ್ತ ಎಸ್.ಪಿ ಸಿದ್ದರಾಜು, ಡಿವೈಎಸ್‌ಪಿ ಗೀತಾ ಬೇನಾಳ ಅವರು ಆಸ್ಪತ್ರೆಗೆ ಭೇಟಿ ನೀಡಿದಾಗ ಒಪಿಡಿ ಪುಸ್ತಕ ದುರ್ಬಳಕೆ ಆಗಿರುವುದು ಬೆಳಕಿಗೆ ಬಂದಿದೆ.
‘ಎರಡು ಕನಸು’ ಚಲನಚಿತ್ರದ ‘ಪೂಜಿಸಲೆಂದೇ ಹೂಗಳ ತಂದೆ...’, ರೇಣುಕಾ ದೇವ್ಯಷ್ಟೋತ್ತರ ಸ್ತೋತ್ರದ ‘ಓಂ ಅಸ್ಯ ಶ್ರೀ ರೇಣುಕಾ ದೇವ್ಯಷ್ಟೋತ್ತರಶತ ನಾಮಾವಲಿ’, ‘ನಾರಾಯಣೀ ಜಗನ್ಮಾತಾ ಜಗದ್ಬೀಜಾ ಜಗತ್ಪ್ರಭಾ’ ಸೇರಿದಂತೆ 15ಕ್ಕೂ ಹೆಚ್ಚು ಸ್ತೋತ್ರಗಳನ್ನು ಒಪಿಡಿ ಪುಸ್ತಕದಲ್ಲಿ ಬರೆಯಲಾಗಿತ್ತು.
ಇದನ್ನು ಗಮನಿಸಿದ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡು ಸಿಡಿಮಿಡಿಗೊಂಡ ಅವರು, ‘ಇದು ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಕ್ಷೇತ್ರದ ಆಸ್ಪತ್ರೇನಾ’ ಎಂದು ಪ್ರಶ್ನಿಸಿದರು.
‘ಅವ್ಯವಸ್ಥೆಯಲ್ಲಿ ನಂಬರ್ ಒನ್ ಆಸ್ಪತ್ರೆ’
ಔಷಧಾಲಯ, ಲ್ಯಾಬ್, ಆಯುಷ್ ಇಲಾಖೆ ಕಚೇರಿ, ಡ್ರೆಸಿಂಗ್ ಮತ್ತು ಸಿಬ್ಬಂದಿ ಕೋಣೆಗಳಲ್ಲಿನ ಅವ್ಯವಸ್ಥೆಯನ್ನು ಕಂಡು ಎಸ್.ಪಿ ಸಿದ್ದರಾಜು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಔಷಧಗಳಿಗೆ ಹೊರಗಡೆ ಚೀಟಿ ಬರೆದು ಕೊಡುವ ಆರೋಪವೂ ರೋಗಿಗಳಿಂದ ಕೇಳಿಬಂತು. ‘ಜೇವರ್ಗಿ ಆಸ್ಪತ್ರೆಗೆ ರಾಜ್ಯದಲ್ಲಿಯೇ ಅವ್ಯವಸ್ಥೆಯಲ್ಲಿ ನಂಬರ್ ಒನ್ ಸ್ಥಾನ ಕೊಡಬೇಕು’ ಎಂದು ಸಿದ್ದರಾಜು ಸಿಡಿಮಿಡಿಗೊಂಡರು.
‘ಸರ್ಕಾರ ನೀಡುವ ಸೌಲಭ್ಯಗಳನ್ನು ರೋಗಿಗಳಿಗೆ ಒದಗಿಸಲು ನಿರ್ಲಕ್ಷ್ಯ ವಹಿಸಬಾರದು. ನಮಗೇ ಉಡಾಫೆಯಿಂದ ಉತ್ತರ ನೀಡುವ ನೀವು, ಆಸ್ಪತ್ರೆಗೆ ಬರುವ ಜನರ ಜತೆಗೆ ಹೇಗೆ ವರ್ತಿಸುತ್ತಿರಬಹುದು’ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಭ್ಯಾಸಕ್ಕಾಗಿ ಸಿಬ್ಬಂದಿಯೊಬ್ಬರು ಈ ರೀತಿ ಮಾಡಿದ್ದಾರೆ. ಸ್ಪಷ್ಟನೆ ಕೇಳಿ ಎಚ್ಚರಿಕೆಯ ನೋಟಿಸ್ ಕೊಡಲಾಗಿದೆಡಾ. ಶರಣಬಸಪ್ಪ ಕ್ಯಾತನಾಳ ಡಿಎಚ್‌ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.