ADVERTISEMENT

ವಸತಿ ನಿಲಯಗಳ ನೂತನ ಕೊಠಡಿಗೆ ₹ 140 ಕೋಟಿ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ವಿಮಾನ ನಿಲ್ದಾಣ ಇದೇ ತಿಂಗಳು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 17:30 IST
Last Updated 9 ನವೆಂಬರ್ 2019, 17:30 IST
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕಲಬುರ್ಗಿಯಲ್ಲಿ ಶನಿವಾರ ಸಾರ್ವಜನಿಕರು ಅಹವಾಲು ಸಲ್ಲಿಸಿದರು
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕಲಬುರ್ಗಿಯಲ್ಲಿ ಶನಿವಾರ ಸಾರ್ವಜನಿಕರು ಅಹವಾಲು ಸಲ್ಲಿಸಿದರು   

ಕಲಬುರ್ಗಿ: ರಾಜ್ಯದಾದ್ಯಂತ ಇರುವ ಸಮಾಜ ಕಲ್ಯಾಣ ‌ಇಲಾಖೆಯ ವಸತಿ ನಿಲಯಗಳಲ್ಲಿ ಹೆಚ್ಚುವರಿ ಕೊಠಡಿ, ಬಚ್ಚಲುಮನೆ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ₹ 140 ಕೋಟಿ ಮೊತ್ತದ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಸತಿನಿಲಯಗಳಲ್ಲಿ ಇದ್ದುಕೊಂಡು ಅಧ್ಯಯನ ‌ಮಾಡುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅವರಿಗೆ ಉತ್ತಮ ಓದುವ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಹಣ ಬಿಡುಗಡೆ ಮಾಡಲಾಗುತ್ತಿದೆ. ವಸತಿ ನಿಲಯಗಳಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ನವೆಂಬರ್‌ನಲ್ಲೇ ವಿಮಾನ ನಿಲ್ದಾಣ ಆರಂಭ: ಕಲಬುರ್ಗಿಯಲ್ಲಿ ನಿರ್ಮಾಣವಾದ ವಿಮಾನ ‌ನಿಲ್ದಾಣದ ಉದ್ಘಾಟನೆ ಇದೇ ತಿಂಗಳು ನೆರವೇರಲಿದೆ. ಪ್ರಧಾನಿ ಅವರನ್ನು ಆಹ್ವಾನಿಸಲಾಗಿದ್ದು, ದಿನಾಂಕ ಸಿಕ್ಕ ಕೂಡಲೇ ಉದ್ಘಾಟನೆ ನಡೆಯಲಿದೆ ಎಂದರು.

ADVERTISEMENT

ಸರ್ಕಾರ ಸತ್ತಿದೆ ಎಂಬ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, ‘ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಎನ್‌ಡಿಆರ್‌ಎಫ್‌ನ ಮಾನದಂಡಗಳನ್ನೂ ಮೀರಿ ಮಾನವೀಯ ನೆಲೆಯಲ್ಲಿ ಪರಿಹಾರ ನೀಡಿದೆ. ನೆರೆಯಿಂದ ಹಾಳಾದ ಒಣ ಬೇಸಾಯದ ಹೊಲಕ್ಕೆ ಪ್ರತಿ ಹೆಕ್ಟೇರ್‌ಗೆ ₹ 16,800, ನೀರಾವರಿ ಬೆಳೆಗೆ ₹ 23 ಸಾವಿರ ಪರಿಹಾರ ನೀಡಲಾಗಿದೆ. ಸಂಪೂರ್ಣ ನೆಲ ಕಚ್ಚಿದ ಮನೆಗಳನ್ನು ಕಟ್ಟಿಸಿಕೊಳ್ಳಲು ₹ 5 ಲಕ್ಷವನ್ನು ಸಂತ್ರಸ್ತರಿಗೆ ಬಿಡುಗಡೆ ಮಾಡಲಾಗಿದೆ. 7.19 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಾಶವಾಗಿದ್ದು, ಸಂತ್ರಸ್ತರ ಖಾತೆಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಸರ್ಕಾರ ಸತ್ತಿದ್ದರೆ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವಿತ್ತೇ’ ಎಂದು ಪ್ರಶ್ನಿಸಿದರು.

‘ಇಷ್ಟೊಂದು ಪರಿಹಾರವನ್ನು ಸಿದ್ದರಾಮಯ್ಯ ಅವರು ಎಂದಾದರೂ ಕೊಟ್ಟಿದ್ದಾರೆಯೇ‌’ ಎಂದರು.

ನಗರದಲ್ಲಿನ ಐತಿಹಾಸಿಕ ಬಹಮನಿ ಕೋಟೆಯ ಒತ್ತುವರಿ ತೆರವುಗೊಳಿಸುವ ಸಂಬಂಧ ಶೀಘ್ರವೇ ಸಭೆ ಕರೆಯುತ್ತೇನೆ ಎಂದು ಕಾರಜೋಳ ತಿಳಿಸಿದರು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ, ‘ಕಲಬುರ್ಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿಜಯಪುರ ಜಿಲ್ಲಾ ಆಸ್ಪತ್ರೆಯು ರಾಜ್ಯದಲ್ಲಿಯೇ ಉತ್ತಮ ಸೇವೆ ನೀಡುವಲ್ಲಿ ಮೊದಲ ಸ್ಥಾನದಲ್ಲಿದೆ. ಅದನ್ನೂ ಮೀರಿಸುವಂತೆ 2 ತಿಂಗಳಲ್ಲಿ ಜಿಮ್ಸ್‌ ಆಸ್ಪತ್ರೆ ಸಜ್ಜುಗೊಳಿಸಲಾಗುವುದು’ ಎಂದರು.

ವಿಧಾನಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಪತ್ರಿಕಾಗೋಷ್ಠಿಯಲ್ಲಿದ್ದರು.

ಗಾಣಗಾಪುರ ಅಭಿವೃದ್ಧಿಗೆ ಒತ್ತು

ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಗಾಣಗಾಪುರಕ್ಕೆ ಭೇಟಿ ನೀಡಿ ದತ್ತಾತ್ರೇಯ ದರ್ಶನ ಪಡೆದರು.

ನಂತರ ದೇವಸ್ಥಾನದ ಸುತ್ತಮುತ್ತಲಿನ ಜಾಗವನ್ನು ಪರಿಶೀಲಿಸಿದರು. ದೇವಸ್ಥಾನ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇತ್ತೀಚೆಗೆ ₹10 ಕೋಟಿ ಬಿಡುಗಡೆ ಮಾಡಿದ್ದು, ಅದನ್ನು ಬಳಸಿಕೊಳ್ಳುವ ಕುರಿತು ಕ್ರಿಯಾ ಯೋಜನೆ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕಾರಜೋಳ, ‘ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಅವರು ₹10 ಕೋಟಿ ನೀಡಿದ್ದಾರೆ.ಕರ್ನಾಟಕ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದ ಭಕ್ತರು ದತ್ತ ಮಂದಿರಕ್ಕೆ ಭೇಟಿ ನೀಡುತ್ತಾರೆ. ಅವರಿಗೆ ಸುಲಭವಾಗಿ ದರ್ಶನ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.