ADVERTISEMENT

ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ

ರಾಜ್ಯ ಸರ್ಕಾರಿ ಹಾಸ್ಟೆಲ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 13:16 IST
Last Updated 28 ಅಕ್ಟೋಬರ್ 2021, 13:16 IST
ಕಲಬುರಗಿಯ ಜಗತ್‌ ವೃತ್ತದ ಬಳಿ ರಾಜ್ಯ ಸರ್ಕಾರಿ ವಸತಿ ನಿಲಯ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ಸದಸ್ಯರು ಗುರುವಾರ ಧರಣಿ ನಡೆಸಿದರು
ಕಲಬುರಗಿಯ ಜಗತ್‌ ವೃತ್ತದ ಬಳಿ ರಾಜ್ಯ ಸರ್ಕಾರಿ ವಸತಿ ನಿಲಯ ಶಾಲಾ ಹೊರ ಗುತ್ತಿಗೆ ನೌಕರರ ಸಂಘದ ಸದಸ್ಯರು ಗುರುವಾರ ಧರಣಿ ನಡೆಸಿದರು   

ಕಲಬುರಗಿ: ಹಾಸ್ಟೆಲ್ ಹೊರಗುತ್ತಿಗೆ ನೌಕರರ ಬಾಕಿ ವೇತನ, ಕೋವಿಡ್ ರಜೆ ವೇತನ ಮತ್ತು ಇಪಿಎಫ್‌ ಹಣವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಇಲ್ಲಿನ ಜಗತ್ ವೃತ್ತದಲ್ಲಿ ಗುರುವಾರದಿಂದ ಅನಿರ್ದಿಷ್ಟ ಅವಧಿಯ ಧರಣಿ ಆರಂಭಿಸಿದರು.

ಜಿಲ್ಲೆಯಲ್ಲಿರುವ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ 5–6 ತಿಂಗಳ ಬಾಕಿ ವೇತನ ಪಾವತಿಸಿರುವುದಿಲ್ಲ. ಅಲ್ಲದೇ, ವೇತನ ಕಡಿತ ಮಾಡಿದ ಇಪಿಎಫ್‌, ಇಎಸ್‌ಐ ಹಣ ನೌಕರರ ಹೆಸರಿಗೆ ಜಮಾ ಮಾಡದೇ ಇರುವುದರಿಂದ ನೌಕರರ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ದೊರೆಯುತ್ತಿಲ್ಲ. ನೌಕರರಿಗೆ ವೇತನ ಪಾವತಿಸುತ್ತಿರುವ ಏಜೆನ್ಸಿಗಳಿಂದ 2020–21ನೇ ಸಾಲಿನ ತಾತ್ಕಾಲಿಕ ನೇಮಕಾತಿ ಆದೇಶ ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸರ್ಕಾರದಿಂದ ವೇತನ ಹಣ ಬಿಡುಗಡೆಯಾಗಲು ವಿಳಂಬವಾದರೂ ಕೂಡಾ ಮ್ಯಾನ್‌ಪವರ್ ಏಜೆನ್ಸಿಗಳು ಕನಿಷ್ಠ ಮೂರು ತಿಂಗಳಾದರೂ ವೇತನ ಪಾವತಿಸಬೇಕೆಂಬ ನಿಯಮವಿದ್ದರೂ 5–6 ತಿಂಗಳ ವೇತನ ಕೊಡದೇ ಮೋಸ ಮಾಡಲಾಗುತ್ತಿದೆ. ಅಲ್ಲದೇ, ಏಜೆನ್ಸಿಗಳಿಗೆ ಪ್ರತಿ ತಿಂಗಳು ನೌಕರರ ಸೇವೆ ಸಲ್ಲಿಸಿದ ಬಗ್ಗೆ ಹಾಜರಾತಿ ಕೊಡದೇ ಇರುವುದರಿಂದ ಪ್ರತಿ ವರ್ಷದಲ್ಲಿ ಒಂದೆರಡು ತಿಂಗಳು ನೌಕರರ ವೇತನ ದುರುಪಯೋಗವಾಗುತ್ತಿದೆ. ಪ್ರತಿ ತಿಂಗಳು 5ನೇ ತಾರೀಖಿನ ಒಳಗಾಗಿ ದುಡಿದ ನೌಕರರ ಹಾಜರಾತಿ ಕೊಡಬೇಕು. ಮತ್ತು 10ನೇ ತಾರೀಖಿನ ಒಳಗಾಗಿ ವೇತನ ಪಾವತಿಸುವ ವ್ಯವಸ್ಥೆ ಮಾಡಬೇಕು ಎಂದರು.

ADVERTISEMENT

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಮೇಘರಾಜ ಕಠಾರೆ, ಕಾರ್ಯದರ್ಶಿ ಸುರೇಶ ದೊಡ್ಡಮನಿ, ಆಳಂದ ತಾಲ್ಲೂಕು ಘಟಕದ ಅಧ್ಯಕ್ಷ ಭಾಗಣ್ಣ ದೇವನೂರ, ಸಹ ಕಾರ್ಯದರ್ಶಿ ರವಿ ಸಿರಸಗಿ, ಮಾಳಪ‍್ಪ ಸಿರಸಗಿ, ಪರಶುರಾಮ ಹಡಲಗಿ, ಮೈಬೂಬಸಾಬ್, ಶೋಭಾ ಸುಲ್ತಾನಪೂರ ಧರಣಿಯ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.