ಕಲಬುರಗಿ: ನಗರದ ಶಹಾಬಜಾರ್ ಬಡಾವಣೆಯಲ್ಲಿ ಮಂಗಳವಾರ ಗೃಹಿಣಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ತಾಲ್ಲೂಕಿನ ಕಲ್ಲಹಂಗರಗಾ ಮೂಲದ ಶಹಾಬಜಾರ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ರೂಪಾ ವೆಂಕಟೇಶ ಬಿರಾದಾರ (35) ಕೊಲೆಯಾದವರು. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೂಪಾ ಅವರು ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ತೆರಳುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕುಟುಂಬದ ಆಪ್ತರೊಬ್ಬರು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಡಿಸಿಪಿ ಕನಿಕಾ ಸಿಕ್ರಿವಾಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಿಷನರ್, ‘ರೂಪಾ ಜತೆಗೆ ಮನೆಯ ಆಪ್ತರೊಂದಿಗೆ ಕೌಟುಂಬಿಕ ಕಲಹ ಏರ್ಪಟ್ಟು ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಬಾಡಿಗೆಯ ಮನೆಯಲ್ಲಿ ವಾಸವಿದ್ದು, ಸಮೋಸ ವ್ಯಾಪಾರ ಮಾಡಿಕೊಂಡಿದ್ದರು. ಮಂಗಳವಾರ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ತೆರಳುತ್ತಿದ್ದಾಗ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆರೋಪಿಯ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸಿ ಕೊಲೆಯ ನೈಜ ಕಾರಣ ಬಹಿರಂಗಪಡಿಸಲಾಗುವುದು’ ಎಂದರು.
ಮಾಂಗಲ್ಯ ಸರ ಕಸಿದು ಪಾರಾರಿ
ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಕೊರಳಿನಿಂದ ಮಾಂಗಲ್ಯ ಸರ, ಮೊಬೈಲ್ ಕಿತ್ತುಕೊಂಡ ಕಳ್ಳರು ಬೈಕ್ ಮೇಲೆ ಪರಾರಿಯಾಗಿದ್ದಾರೆ.
ತಾಡತೆಗನೂರ ನಿವಾಸಿ ಭಾರತಿ ಬಸವರಾಜ ಅವರ ಕೊರಳಲ್ಲಿದ್ದ ₹ 50 ಸಾವಿರ ಮೌಲ್ಯದ ಮಾಂಗಲ್ಯ ಸರ ಹಾಗೂ ಮೊಬೈಲ್ ಕಿತ್ತುಕೊಳ್ಳಲಾಗಿದೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತಿ ಅವರು ಭಾನುವಾರ ರಾತ್ರಿ ಮನೆಯ ಸಮೀಪದ ಕಡಣಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಬೈಕ್ ಮೇಲೆ ಹಿಂದಿನಿಂದ ಬಂದ ಕಳ್ಳರು, ಭಾರತಿ ಅವರ ಕೊರಳಲ್ಲಿನ ಮಾಂಗಲ್ಯ ಸರವನ್ನು ಕಿತ್ತುಕೊಂಡು, ಕೈಯಲ್ಲಿನ ಮೊಬೈಲ್ ಕಸಿದು ಪರಾರಿ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಶೀಟರ್ ಚೇತನ್ ಗಡಿಪಾರು
ರೌಡಿಶೀಟರ್ ಚೇತನ್ ಚಂದ್ರಕಾಂತನನ್ನು ತುಮಕೂರು ಟೌನ್ ಪೊಲೀಸ್ ಠಾಣೆಗೆ ಗಡಿಪಾರು ಮಾಡಲಾಗಿದೆ. ಚೇತನ್ ವಿರುದ್ಧ ಅಶೋಕ ನಗರ ಸ್ಟೇಷನ್ ಬಜಾರ್ ಸಬರ್ಬನ್ ಮತ್ತು ಆರ್.ಜಿ. ನಗರ ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. 14 ಪ್ರಕರಣಗಳಲ್ಲಿ ಆರೋಪಿತನಾಗಿದ್ದಾನೆ. ಕೊಲೆಗೆ ಯತ್ನ ಮಾರಕಾಸ್ತ್ರಗಳಿಂದ ಹಲ್ಲೆ ಸುಲಿಗೆ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ ಮಾಡಿರುವುದು ಸೇರಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪ್ರಮುಖ ರೌಡಿಶೀಟರ್ ಪಟ್ಟಿಯಲ್ಲಿಯೂ ಗುರುತಿಸಿಕೊಂಡಿದ್ದ. ಸಾರ್ವಜನಿಕರ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಪ್ರಕರಣಗಳಲ್ಲಿ ಸಹ ಆರೋಪಿ ಆಗಿದ್ದ ಎಂದು ಡಿಸಿಪಿ ಕನಿಕಾ ಸಿಕ್ರಿವಾಲ್ ಅವರು ಗಡಿಪಾರ ಆದೇಶ ಮಾಡಿದ್ದಾರೆ. ಆರೋಪಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಾಗೂ ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಪಾಡಲು ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡುವಂತೆ ಅಶೋಕ ನಗರ ಠಾಣೆಯ ಪಿಐ ಅರುಣಕುಮಾರ ಅವರು ಗಡಿಪಾರಿಗೆ ಪ್ರಸ್ತಾವ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.