ADVERTISEMENT

ದಾಸ್ತಾನಿದ್ದ ಮರಳು ಸಾಗಣೆ ಕಾನೂನು ಬಾಹಿರ: ಅವ್ವಣ್ಣ ಮ್ಯಾಕೇರಿ

ಮರಳು ಅಕ್ರಮ: ಜಿಲ್ಲಾ ರೈತ ಹೋರಾಟ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಆರೋಪ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 6:09 IST
Last Updated 22 ಆಗಸ್ಟ್ 2025, 6:09 IST
ಅವ್ವಣ್ಣ ಮ್ಯಾಕೇರಿ
ಅವ್ವಣ್ಣ ಮ್ಯಾಕೇರಿ   

ಕಲಬುರಗಿ: ‘ಮರಳು ಅಕ್ರಮ ಗಣಿಗಾರಿಕೆಯ ಮೂಲಕ ಚಿತ್ತಾಪುರ ತಾಲ್ಲೂಕಿನ ಬಾಗೋಡಿ ಗ್ರಾಮದ ಕಾಗಿಣಾ ನದಿಯಲ್ಲಿ ಕೆಆರ್‌ಡಿಎಲ್‌ ದಾಸ್ತಾನು ಮಾಡಿದ ಮರಳು ಸರಬರಾಜು ಮತ್ತೆ ಆರಂಭಗೊಂಡಿದೆ. ಇದನ್ನು ಕೂಡಲೇ ತಡೆಹಿಡಿಯಬೇಕು’ ಎಂದು ಜಿಲ್ಲಾ ರೈತ ಹೋರಾಟ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಆಗ್ರಹಿಸಿದರು.

‘ಸದರಿ ಮರಳು ಅಕ್ರಮ ಗಣಿಗಾರಿಕೆ ಬಗೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬಳ್ಳಾರಿಯ ಹೆಚ್ಚುವರಿ ನಿರ್ದೇಶಕರು ಜಂಟಿ ಸಮೀಕ್ಷೆ ನಡೆಸಿ, ಮರಳು ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಹೇಳಿದ್ದಾರೆ. ಅಕ್ರಮದಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮಕೈಗೊಳ್ಳುವ ಮುನ್ನವೇ ಮತ್ತೆ ಮರಳು ಸರಬರಾಜು ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ’ ಎಂದು ಗುರುವಾರ ಪ್ರತಿಕಾಗೋಷ್ಠಿಯಲ್ಲಿ ದೂರಿದರು.

‘ನಮ್ಮ ಹೋರಾಟದ ಫಲವಾಗಿ ಅಕ್ರಮ ಮತ್ತು ಅನಧಿಕೃತ ಮರಳುಗಾರಿಕೆ ನಿಲ್ಲಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು ಮತ್ತು ಪ್ರಾದೇಶಿಕ ಆಯುಕ್ತರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದರೂ ಇಲ್ಲಿವರೆಗೆ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಯಾರೊಬ್ಬರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಇದನ್ನು ನೋಡಿದರೆ ಅವರೂ ಅಕ್ರಮದಲ್ಲಿ ಶಾಮೀಲಾದ ಶಂಕೆ ಕಾಡುತ್ತಿದೆ. ಸಂವಿಧಾನ, ಅಂಬೇಡ್ಕರ್‌ ಬಗೆಗೆ ಅನುಕ್ಷಣವೂ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವರೂ ಮೌನ ಮುರಿಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಈ ನಡುವೆಯೇ ಆಗಸ್ಟ್‌ 20ರಂದು ಏಕಾಏಕಿ ಸುಮಾರು 90 ರಿಂದ 100 ಟಿಪ್ಪರ್‌ಗಳ ಮೂಲಕ ದಾಸ್ತಾನಿದ್ದ ಮರಳನ್ನು ಸಾಗಿಸಲು ಯತ್ನಿಸಲಾಗಿದೆ. ಇದರಿಂದ ಮುಂದಿನ ಅತ್ಯಾಧುನಿಕ ವೈಜ್ಞಾನಿಕ ಸಮೀಕ್ಷೆಗೆ ಸಾಕ್ಷಿ ನಾಶ ಮಾಡುವ ಸಂಭವ ಕಾಣುತ್ತಿದೆ. ಜಿಲ್ಲಾಧಿಕಾರಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ನ್ಯಾಯಾಲಯಕ್ಕೆ ಮೊರೆ ಹೋಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ ಪಾಟೀಲ, ಬಸವರಾಜ ಗುಂಡಲಗೇರಿ, ಬಸವರಾಜ ಮದ್ದರಕಿ, ನಾಗರಾಜ ನಾಟಿಕರ್‌, ಚಂದ್ರಕಾಂತ ಇದ್ದರು.

‘ಬೆಳೆ ಹಾನಿಗೆ ಪರಿಹಾರ ಕೊಡಲಿ’

‘ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ. ಸರ್ಕಾರ ಕೂಡಲೇ ಕಲಬುರಗಿಯನ್ನು ಅತಿವೃಷ್ಟಿ ಜಿಲ್ಲೆ ಎಂದು ಘೋಷಿಸಿ ಪ್ರತಿ ಎಕರೆಗೆ ₹10 ಸಾವಿರ ಮಧ್ಯಂತರ ಪರಿಹಾರ ಒದಗಿಸಬೇಕು. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಹಾಗೂ ವಿಮಾ ಕಂಪನಿಗಳಿಂದ ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ಕೊಡಿಸಬೇಕು. ಇದರೊಂದಿಗೆ ಮಳೆಯಿಂದಾದ ಮನೆಗಳ ಹಾನಿ ಜೀವಹಾನಿಗಳಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು’ ಎಂದು ಅವ್ವಣ್ಣ ಮ್ಯಾಕೇರಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.