ADVERTISEMENT

ಕಲಬುರಗಿ | ಅನೈತಿಕ ಸಂಬಂಧ: ಪತ್ನಿ, ಪ್ರಿಯಕರನ ಕೊಂದ ಪತಿ

ಪಂಪ್ ಆಪರೇಟರ್ ಹುದ್ದೆಗೆ ನೇಮಕವಾಗಿದ್ದ ಕೊಲೆಯಾದ ಖಾಜಪ್ಪ

​ಪ್ರಜಾವಾಣಿ ವಾರ್ತೆ
Published 2 ಮೇ 2025, 16:33 IST
Last Updated 2 ಮೇ 2025, 16:33 IST
<div class="paragraphs"><p>ಶ್ರೀಮಂತ ಭಕರೆ, ಖಾಜಪ್ಪ ಗಾಡಿವಡ್ಡರ, ಸೃಷ್ಟಿ ಭಕರೆ</p></div>

ಶ್ರೀಮಂತ ಭಕರೆ, ಖಾಜಪ್ಪ ಗಾಡಿವಡ್ಡರ, ಸೃಷ್ಟಿ ಭಕರೆ

   

ಆಳಂದ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಹೊಂದಿರುವ ಶಂಕೆಯಿಂದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಗುರುವಾರ ರಾತ್ರಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಗ್ರಾಮದ ಸೃಷ್ಟಿ ಶ್ರೀಮಂತ ಭಕರೆ (21), ಆಕೆಯ ಪ್ರಿಯಕರ ಖಾಜಪ್ಪ ದುರ್ಗಪ್ಪ ಗಾಡಿವಡ್ಡರ (23) ಎಂಬುವವರನ್ನು ಶ್ರೀಮಂತ ಶಾಂತಮಲ್ಲಪ್ಪ ಭಕರೆ ಕೊಲೆ ಮಾಡಿದ್ದಾನೆ.

ADVERTISEMENT

‘ಎರಡು ವರ್ಷಗಳ ಹಿಂದೆ ಸೃಷ್ಟಿ ಮತ್ತು ಶ್ರೀಮಂತ ಅವರ ಮದುವೆ ಆಗಿತ್ತು. ಗ್ರಾಮದ ಯುವಕ ಖಾಜಪ್ಪ ಜತೆ ಸೃಷ್ಟಿ ಅಕ್ರಮ ಸಂಬಂಧ ಹೊಂದಿದ್ದಳು. ರಾತ್ರಿ ಪತಿ ಇಲ್ಲದಿದ್ದಾಗ ಖಾಜಪ್ಪ ಮನೆಗೆ ಬಂದಿದ್ದ. ಪತ್ನಿ ಹಾಗೂ ಪ್ರಿಯಕರ ಮನೆಯಲ್ಲಿ ಇದ್ದುದ್ದನ್ನು ನೋಡಿದ ಶ್ರೀಮಂತ ಇಬ್ಬರನ್ನೂ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಮಾದನ ಹಿಪ್ಪರಗಿ ಪೊಲೀಸ್‌ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿರುವುದಾಗಿ ಶರಣಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಆರೋಪಿ ಶ್ರೀಮಂತ ಗುರುವಾರ ರಾತ್ರಿ ಕಲ್ಲಂಗಡಿ ಬೆಳೆಗೆ ಮಲ್ಚಿಂಗ್ ಮಾಡುವ ಉದ್ಯೋಗ ಮಾಡುತ್ತಿದ್ದ. ಅದೇ ಕೆಲಸಕ್ಕೆ ಬೇರೆಯವರ ಹೊಲಕ್ಕೆ ಹೋಗಿದ್ದ. ಮನೆಗೆ ಬರುವುದು ತಡವಾಗುತ್ತದೆ ಎಂದು ಪತ್ನಿ ಸೃಷ್ಟಿಗೆ ಕರೆ ಮಾಡಿ ತಿಳಿಸಿದ್ದ. ಹೀಗಾಗಿ ಸೃಷ್ಟಿ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ. ಪಲ್ಸರ್ ಬೈಕ್‌ನಲ್ಲಿ ಬಂದ ಖಾಜಪ್ಪ ಸೃಷ್ಟಿ ಮನೆಯೊಳಗೆ ಹೋಗಿದ್ದಾನೆ. ಇದನ್ನು ಗಮನಿಸಿದ ಓಣಿಯ ಕೆಲವರು ಮನೆಯ ಹೊರಭಾಗದಲ್ಲಿ ಕೀಲಿ ಹಾಕಿ ಶ್ರೀಮಂತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಹೊರಟು ಬಂದ ಶ್ರೀಮಂತ ಕೊಡಲಿ ತೆಗೆದುಕೊಂಡು ಮನೆಯೊಳಗೆ ಹೋಗಿದ್ದಾನೆ. ತನ್ನ ಪತ್ನಿಯೊಂದಿಗೆ ಇದ್ದ ಖಾಜಪ್ಪನನ್ನು ಮನೆಯ ಹಿಂಬದಿಗೆ ಕರೆದೊಯ್ದು ಮನಬಂದಂತೆ ಕಡಿದು ಕೊಲೆ ಮಾಡಿದ್ದಾನೆ. ಶವವನ್ನು ಮನೆಯೊಳಗೆ ತಂದು ಹಾಕಿದ್ದಾನೆ. ನಂತರ ಪತ್ನಿಯನ್ನೂ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪಂಪ್ ಆಪರೇಟರ್ ಹುದ್ದೆಗೆ ಆಯ್ಕೆ: ಕೊಲೆಯಾದ ಖಾಜಪ್ಪನಿಗೆ ಗ್ರಾಮ ಪಂಚಾಯಿತಿಯಲ್ಲಿ ಪಂಪ್ ಆಪರೇಟರ್ ಹುದ್ದೆಗೆ ನೇಮಕವಾಗಿತ್ತು. ಕೆಲವೇ ದಿನಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುವವನಿದ್ದ. ಅಷ್ಟರಲ್ಲಿ ಕೊಲೆ ನಡೆದಿದೆ. ತನ್ನ ಪತ್ನಿಯೊಂದಿಗೆ ಖಾಜಪ್ಪ ಸಂಬಂಧ ಹೊಂದಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಶ್ರೀಮಂತ ಭಕರೆ ಎರಡು ಬಾರಿ ಎಚ್ಚರಿಕೆ ನೀಡಿದ್ದ. ಆದರೂ, ಎಚ್ಚರಿಕೆ ನಿರ್ಲಕ್ಷಿಸಿ ಸಂಬಂಧ ಮುಂದುವರೆಸಿದ್ದರು ಎನ್ನಲಾಗಿದೆ.

ಶುಕ್ರವಾರ ಬೆಳಿಗ್ಗೆ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಪ್ರಕಾಶ ಯಾತನೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.