ಕಲಬುರಗಿ: ‘ಪ್ರಕೃತಿ ವಿಕೋಪದಿಂದ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಅಧಿಕಾರಿಗಳು ಎಲ್ಲ ರೀತಿಯಿಂದಲೂ ಸಜ್ಜಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಸಕ್ತ ಸಾಲಿನ ಮುಂಗಾರು ಮಳೆ ಅವಧಿ ಪೂರ್ವ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಕೈಗೊಳ್ಳುವ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಅವರು ಮಾತನಾಡಿದರು.
ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಬೆಳೆಹಾನಿ, ಪ್ರಾಣಿಹಾನಿ ಮತ್ತು ಕೃಷಿಯ ಉತ್ಪದಾನೆಗೆ ಬೇಕಾದ ರಸಗೊಬ್ಬರ ಪೂರೈಕೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.
‘ಜಿಲ್ಲೆಯಲ್ಲಿ ಜನವರಿ 1ರಿಂದ ಜೂನ್ 29ರವರೆಗೆ ವಾಡಿಕೆಯಂತೆ 168.5 ಮಿಲಿ ಮೀಟರ್ ಮಳೆಯಾಗಬೇಕಾಗಿತ್ತು. 280.4 ಮಿ.ಮೀಟರ್ ಅಂದರೆ ಶೇ 72ರಷ್ಟು ಹೆಚ್ಚು ಮಳೆಯಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದರು. ಬಿತ್ತನೆ ಬೀಜಗಳ ಸರಬರಾಜು ಹಾಗೂ ವಿತರಣೆಯ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಇನಾಂದಾರ ಮಾತನಾಡಿ, ‘ಒಂದು ಸಾವಿರ ಕ್ವಿಂಟಲ್ ಸೋಯಾಬಿನ್ ಬೀಜಗಳ ಸಂಗ್ರಹವಿದೆ. ಜಿಲ್ಲೆಯಲ್ಲಿ ಶೇ 45ರಷ್ಟು ಬಿತ್ತನೆಯಾಗಿದೆ’ ಎಂದು ಹೇಳಿದರು.
‘ಅಮರ್ಜಾ ಜಲಾಶಯ 461.50 ಮೀಟರ್ ಸಂಗ್ರಹ ಸಾಮರ್ಥ್ಯ ಇದ್ದು, 458.57 ಮೀಟರ್ ನೀರಿನ ಸಂಗ್ರಹ ಆಗಿದೆ. ಬೆಣ್ಣೆತೋರಾ ಜಲಾಶಯ 438.89 ಮೀಟರ್ ಪೈಕಿ 437.80 ಸಂಗ್ರಹ ಆಗಿದೆ. ಭೀಮಾ ಜಲಾಶಯ 406.40 ಮೀಟರ್ ಪೈಕಿ 404.60 ಮೀಟರ್ ನೀರು ಸಂಗ್ರಹವಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಕಾರ್ಯದರ್ಶಿಯವರು ವಿಡಿಯೊ ಕಾನ್ಫರೆನ್ಸ್ ಮೂಲಕ ಅಫಜಲಪುರ ಮತ್ತು ಜೇವರ್ಗಿ ತಹಶೀಲ್ದಾರ್, ಇಒಗಳೊಂದಿಗೆ ಮುಂಜಾಗ್ರತೆ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ತಹಶೀಲ್ದಾರ್ ಮಲ್ಲಣ್ಣ ಯಲ್ಲಗೋಡ, ‘ಈಗಾಗಲೇ ಜೇವರ್ಗಿ ತಾಲ್ಲೂಕಿನ 44 ಗ್ರಾಮಗಳು ಪ್ರವಾಹ ಸಂಭವಿಸುವ ಸಂದರ್ಭವಿದ್ದು, 22 ಕಾಳಜಿ ಕೇಂದ್ರ ಸ್ಥಳ, 9 ಗೋಶಾಲೆಗಳನ್ನು ಗುರುತಿಸಲಾಗಿದೆ’ ಎಂದು ಹೇಳಿದರು.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವಿಂದ್ರ ಕರಲಿಂಗಣ್ಣನವರ, ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಉಪವಿಭಾಗಾಧಿಕಾರಿಗಳಾದ ಸಾಹಿತ್ಯ, ಪ್ರಭುರೆಡ್ಡಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.