ADVERTISEMENT

ವಾಯುಮಾಲಿನ್ಯ ಹೆಚ್ಚಳ: ತಡೆಗೆ ಹಲವು ಕ್ರಮ

ನಗರದ ಕೆಲ ರಸ್ತೆ ವಿಭಜಕದಲ್ಲಿ ಗಿಡಗಳ ಪೋಷಣೆ, ಪಾದಚಾರಿ ಮಾರ್ಗಗಳ ನಿರ್ಮಾಣ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 17 ನವೆಂಬರ್ 2022, 10:46 IST
Last Updated 17 ನವೆಂಬರ್ 2022, 10:46 IST
ಕಲಬುರಗಿಯ ತಾಜ್‌ ಸುಲ್ತಾನಪುರ ರಸ್ತೆ ಮಧ್ಯದಲ್ಲಿ ಪಾಲಿಕೆಯಿಂದ ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸುತ್ತಿರುವುದು
ಕಲಬುರಗಿಯ ತಾಜ್‌ ಸುಲ್ತಾನಪುರ ರಸ್ತೆ ಮಧ್ಯದಲ್ಲಿ ಪಾಲಿಕೆಯಿಂದ ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸುತ್ತಿರುವುದು   

ಕಲಬುರಗಿ: ನಗರದಲ್ಲಿ ದೂಳಿನ ಪ್ರಮಾಣ ಹೆಚ್ಚುತ್ತಲೇ ಇದೆ. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು. ರಸ್ತೆ ಬದಿಯ ನಿವಾಸಿಗಳ ಆರೋಗ್ಯದ ಮೇಲೆ ಸಣ್ಣ ಸಣ್ಣ ಮಣ್ಣಿನ ಕಣಗಳ ದೂಳು ದುಷ್ಪರಿಣಾಮ ಬೀರುತ್ತಿವೆ.

ನಗರದ ಕೇಂದ್ರ ಬಸ್‌ ನಿಲ್ದಾಣ, ಐಟಿಐ ಕಾಲೇಜು, ತಾಜ್‌ ಸುಲ್ತಾನ್‌ಪುರ ರಸ್ತೆ, ಗಂಜ್‌ ರಸ್ತೆ, ಹಳೆ ಜೇವರ್ಗಿ ರಸ್ತೆ, ಇಎಸ್‌ಐ ಆಸ್ಪತ್ರೆ, ರಿಂಗ್‌ ರೋಡ್‌, ಕಣ್ಣಿ ಮಾರುಕಟ್ಟೆ ಪ್ರದೇಶ, ಸೂಪರ್ ಮಾರುಕಟ್ಟೆ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಿದೆ. ಇದರಿಂದ ಈ ರಸ್ತೆಗಳಲ್ಲಿ ಹೆಚ್ಚು ದೂಳು ಇರುತ್ತದೆ. ಜೊತೆಗೆ ವಾಹನಗಳು ಹೊರಸೂಸುವ ಇಂಗಾಲವು ಸಹ ಗಾಳಿಯಲ್ಲಿ ಸೇರುತ್ತಿದೆ.

ತುಸು ಗಾಳಿ ಬೀಸಿದರೂ ರಸ್ತೆ ಬದಿಯ ದೂಳು ಮುಖಕ್ಕೆ ರಾಚುತ್ತದೆ. ಇದರಿಂದ ಜನರಿಗೆ ಹೃದಯ ಸಂಬಂಧಿ ಕಾಯಿಲೆ, ಒಣ ಕೆಮ್ಮು ಸೇರಿ ಶ್ವಾಸಕೋಶ ತೊಂದರೆ ಕಾಣಿಸಿಕೊಳ್ಳುತ್ತಿವೆ.

ADVERTISEMENT

‌ದೂಳಿನ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಆದರೆ, ದೂಳು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.

ಹೆಚ್ಚು ವಾಯುಮಾಲಿನ್ಯ ನಗರ: ದೇಶದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿದ 132 ನಗರಗಳಲ್ಲಿ ಕಲಬುರಗಿ ನಗರವೂ ಒಂದು ಎಂಬ ವಿಷಯವು ದೆಹಲಿಯ ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ನವೆಂಬರ್ 2ರಂದು ವರದಿ ನೀಡಿದೆ. ಅತಿಯಾದ ದೂಳಿನ ಕಣಗಳಿಂದ ವಾಯು ಮಾಲಿನ್ಯ ಹೆಚ್ಚಿದೆ ಎಂಬ ಅಂಶ ವರದಿ ತಿಳಿಸಿದೆ.

ಬೆಂಗಳೂರು, ಹುಬ್ಬಳ್ಳಿ–ಧಾರವಾಡ, ದಾವಣಗೆರೆ ಮತ್ತು ಕಲಬುರಗಿಯ ವಾತಾವರಣದಲ್ಲಿ ಜೀವಕ್ಕೆ ಹಾನಿ ಉಂಟು ಮಾಡುವ ದೂಳಿನ ಕಣಗಳು ಹೆಚ್ಚು ಇವೆ ಎಂಬ ಅಂಶ ವರದಿಯಲ್ಲಿದೆ. ವಾತಾವರಣದಲ್ಲಿ ಇರುವ ದೂಳಿನ ಕಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅದರ ನಿರ್ಮೂಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದೆ.

--

4 ಕಡೆ ವಾಯುಮಾಲಿನ್ಯ ಮಾಹಿತಿ ಫಲಕ

‘ನಗರದಲ್ಲಿ ಹೆಚ್ಚಾಗುತ್ತಿರುವ ದೂಳಿನ ಪ್ರಮಾಣದ ಮಾಹಿತಿ ಸಂಗ್ರಹಿಸಲು ನಗರದಲ್ಲಿ ನಾಲ್ಕು ಕಡೆ ವಾಯು ಮಾಲಿನ್ಯ ಮಾಹಿತಿ ಫಲಕಗಳ ಅಳವಡಿಸಲಾಗಿದೆ‘ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲೆಯ ಪರಿಸರ ಅಧಿಕಾರಿ ಜಿಲ್ಲೆಯ ಪರಿಸರ ಅಧಿಕಾರಿ ಸಿ.ಎನ್‌.ಮಂಜಪ್ಪ ತಿಳಿಸಿದರು.

‘ಕೇಂದ್ರ ಬಸ್‌ ನಿಲ್ದಾಣ ರಸ್ತೆಯ ಐಟಿಐ ಕಾಲೇಜು ಆವರಣ, ಸಂತ್ರಾಸವಾಡಿಯಲ್ಲಿನ ಮಂಡಳಿಯ ಪ್ರಾದೇಶಿಕ ಕಚೇರಿ ಆವರಣ (ನಿರಂತರ ವಾಯು ಗುಣಮಟ್ಟ ಅಧ್ಯಯನ ಕೇಂದ್ರ), ಮಹಾನಗರ ಪಾಲಿಕೆ ಹಾಗೂ ಹೈಕೋರ್ಟ್‌ ಬಳಿಯ ಕಾನೂನು ಮಾಪನ ಶಾಸ್ತ್ರ ಇಲಾಖೆ ಆವರಣ (ಮಾನವ ಚಾಲಿತ ಮಾಪನ ಕೇಂದ್ರ). ಈ ಸ್ಥಳಗಳಲ್ಲಿ ಅತ್ಯಾಧುನಿಕ ಪರಿಕರಗಳನ್ನು ಒಳಗೊಂಡ ನಿರಂತರ ವಾಯು ಗುಣಮಟ್ಟ ಮಾಪನ ವ್ಯವಸ್ಥೆ (ಸಿಎಎಸಿಎಂಎಸ್‌) ಫಲಕವವನ್ನು ಅಳವಡಿಸಲಾಗಿದೆ’ ಎಂದು ತಿಳಿಸಿದರು.

‘ಈ ಕೇಂದ್ರಗಳು ಗಾಳಿಯ ವೇಗ, ಬಿಸಿಗಾಳಿ, ಉಷ್ಣಾಂಶ, ದೂಳಿನ ಸಣ್ಣ ಸಣ್ಣ ಕಣಗಳ ಮಾಹಿತಿ ಸಂಗ್ರಹಿಸಿ, ಜಾಹೀರಾತು ಫಲಕದ ಮಾದರಿಯ ಸೂಚನಾ ಫಲಕದ ಮೇಲೆ ಮೂಡಿಸಲಿವೆ. ಇದೇ ಮಾಹಿತಿಯು ಕೇಂದ್ರ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿಗೂ ರವಾನೆಯಾಗುತ್ತದೆ’ ಎಂದು ಅವರು ತಿಳಿಸಿದರು.

‘ವಾಯುಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ಪೋಷಣೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಮಂಡಳಿಯು 2021ರಲ್ಲಿ ₹ 2.31ಕೋಟಿ ಅನುದಾನ ಕೊಟ್ಟಿತ್ತು. ಪಾಲಿಕೆ ನೇತೃತ್ವದಲ್ಲೇ ಗಿಡ–ಮರಗಳ ಪೋಷಣೆ, ಪಾದಚಾರಿ ಮಾರ್ಗಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಈ ಬಾರಿ ₹ 8.31ಕೋಟಿ ಅನುದಾನ ಅಗತ್ಯವಿದ್ದು, ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.

__

ಪಾದಚಾರಿ ಮಾರ್ಗ ಅಭಿವೃದ್ಧಿ

‘ದರ್ಗಾ, ಎಂ.ಬಿ.ನಗರ, ರಾಮ ಮಂದಿರ, ಗಣೇಶ ಮಂದಿರ ರಸ್ತೆ, ಪಂಚಶೀಲ ನಗರ ಸೇರಿ ಕೆಲವೆಡೆ ಮೊದಲ ಹಂತದಲ್ಲಿ₹ 5 ಕೋಟಿ ವೆಚ್ಚದಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ₹ 2 ಕೋಟಿ ವೆಚ್ಚದಲ್ಲಿ ನಗರದ ರಸ್ತೆ ಬದಿ ಮತ್ತು ಉದ್ಯಾನಗಳಲ್ಲಿ ಗಿಡಗಳನ್ನು ನೆಡಲಾಗುತ್ತಿದೆ’ ಎಂದು ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ.ಜಾಧವ್‌ ಹೇಳಿದರು.

___

ನಗರದ ವಾಯುವಿನ ಗುಣಮಟ್ಟದ ವಿವರ

ಮಾಲಿನ್ಯಕಾರಕ ಅಂಶ; ಸ್ಟೇಷನ್‌1;ಸ್ಟೇಷನ್‌2;ಸ್ಟೇಷನ್‌3;ಸ್ಟೇಷನ್‌4;24ಗಂಟೆಗಳ ಮಾನದಂಡ

ದೂಳಿನ ಕಣ 10ಪಿಎಂ;68.36;59.61;50.0;–;100

ದೂಳಿನ ಕಣ 2.5ಪಿಎಂ;33.75;45.22;18.0;–;60

(ಮಾಹಿತಿ: ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ. ಅಕ್ಟೋಬರ್‌ 24ರಿಂದ ಅ.30ರ ವರೆಗೆ ದಾಖಲಾದ ವಿವರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.