ADVERTISEMENT

ಅಫಜಲಪುರ: ಕಬ್ಬು ಕಟಾವು ಯಂತ್ರಕ್ಕೆ ಹೆಚ್ಚಿದ ಬೇಡಿಕೆ, ಕೂಲಿಕಾರರ ಸಮಸ್ಯೆ

ಕಾರ್ಖಾನೆಗಳ ಕಣ್ಣಾಮುಚ್ಚಾಲೆ ಆಟ

ಶಿವಾನಂದ ಹಸರಗುಂಡಗಿ
Published 1 ಡಿಸೆಂಬರ್ 2021, 6:42 IST
Last Updated 1 ಡಿಸೆಂಬರ್ 2021, 6:42 IST
ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಭೀಮು ಮಠಪತಿ ಅವರ ತೋಟದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಯಂತ್ರ
ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಭೀಮು ಮಠಪತಿ ಅವರ ತೋಟದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಯಂತ್ರ   

ಅಫಜಲಪುರ: ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಕಬ್ಬು ಕಟಾವು ಆರಂಭವಾಗಿದೆ. ಆದರೆ ಕೂಲಿಕಾರರ ಸಮಸ್ಯೆಯಿಂದ ಕೆಲಸ ನಿಧಾನವಾಗುತ್ತಿದೆ. ಹೀಗಾಗಿ ರೈತರು ಯಂತ್ರಗಳ ಮೊರೆ ಹೋಗಿದ್ದು ಕಬ್ಬು ಕಟಾವು ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ಸುಮಾರು 40 ಸಾವಿರ ಎಕರೆ ಕಬ್ಬು ನಾಟಿ ಮಾಡಲಾಗಿದೆ. ಕಬ್ಬು ಕಟಾವಿನ ಹಂತದಲ್ಲಿ ಕೂಲಿಕಾರರು ದೊರೆಯುತ್ತಿಲ್ಲ. ಟೋಳಿಗಳು ಕಬ್ಬು ಕಡಿಯಲು ಪ್ರತಿ ಎಕರೆಗೆ ₹4–5 ಸಾವಿರ ಬೇಡುತ್ತಿದ್ದಾರೆ. ಇಷ್ಟೊಂದು ಹಣ ನೀಡಿದರೂ ಅರ್ಧಕ್ಕೆ ಬಿಟ್ಟು ಹೋಗುತ್ತಾರೆ ಹೀಗಾಗಿ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ ಸಕ್ಕರೆ ಕಾರ್ಖಾನೆಯವರು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರವು ಕ್ರಮಕೈಗೊಳ್ಳುತ್ತಿಲ್ಲ ಹೀಗಾಗಿ ರೈತರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವುದು ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ ಕಬ್ಬು ಬೆಳೆಗಾರರ ಶಿವಣ್ಣ ಬಿಂಜಗೇರಿ.

ಯಂತ್ರಧಾರೆ ಯೋಜನೆಯಡಿಯಲ್ಲಿ ಪ್ರತಿಯೊಂದು ವ್ಯವಸಾಯ ಸಹಕಾರಿ ಸಂಘಗಳ ಮುಖಾಂತರ ಕಬ್ಬು ಕಟಾವು ಮಾಡಲು ಸರ್ಕಾರ ಯಂತ್ರಗಳನ್ನು ಪೂರೈಕೆ ಮಾಡಿದರೆ ಕಡಿಮೆ ಬಾಡಿಗೆ ದರದಲ್ಲಿ ಅನುಕೂಲವಾಗುತ್ತದೆ ಎಂದು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಭೀಮರಾವ್ ಗೌರ ಹೇಳಿದರು.

ADVERTISEMENT

ಕಬ್ಬು ಬೆಳೆಯುವುದಕ್ಕಿಂತಲೂ ಕಾರ್ಖಾನೆಗೆ ಕಳಿಸಿಕೊಡುವುದು ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಸಕ್ಕರೆ ಕಾರ್ಖಾನೆಯವರು ಬೇಸಿಗೆ ಅವಧಿಯಲ್ಲಿ ಕಬ್ಬು ಬೆಳೆಗಾರರ ಸಭೆ ಕರೆದು ಕಟಾವು ಮಾಡುವ ಬಗ್ಗೆ ಮಾಹಿತಿ ನೀಡಬೇಕು ಮತ್ತು ಸರತಿ ಮೇಲೆ ಕಬ್ಬು ಕಟಾವು ಮಾಡುವ ವ್ಯವಸ್ಥೆ ಆಗಬೇಕು. ಅಂದಾಗ ಯಾವುದೇ ತೊಂದರೆಯಾಗುವುದಿಲ್ಲ ಪ್ರತಿಯೊಬ್ಬರ ಕಬ್ಬು ಕಡ್ಡಾಯವಾಗಿ ಕಟಾವು ಆಗುತ್ತದೆ ಎಂದು ಕಬ್ಬು ಬೆಳೆಗಾರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.