ಕಲಬುರಗಿ: ಭಾರತ–ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ನವವಿವಾಹಿತ ಯೋಧನನ್ನು ಕರ್ತವ್ಯಕ್ಕೆ ಕರೆಸಿಕೊಂಡಿದೆ.
ನಗರದ ಸೈಯದ್ ಚಿಂಚೋಳಿ ರಸ್ತೆಯ ಶಿವಶಕ್ತಿ ನಗರದ ನಿವಾಸಿ ತೂಗುದೀಪಕುಮಾರ್ ಕರ್ತವ್ಯಕ್ಕೆ ಮರಳಿದವರು. ಕಳೆದ ಏಪ್ರಿಲ್ 30ರಂದು ತೂಗುದೀಪ ಕುಮಾರ್ ಶ್ರದ್ಧಾ ಅವರನ್ನು ಮದುವೆಯಾಗಿದ್ದರು. ತೂಗುದೀಪಕುಮಾರ್ ಒಂದು ತಿಂಗಳ ರಜೆಗಾಗಿ ನಗರಕ್ಕೆ ಬಂದಿದ್ದರು. ಪಹಲ್ಗಾಮ್ ದಾಳಿಯ ಬಳಿಕ ಮೇ 7ರಂದು ಭಾರತ–ಪಾಕಿಸ್ತಾನದ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಆಗಲೇ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೇನೆಯಿಂದ ಕರೆ ಬಂದಿತ್ತು.
ಅರುಣಾಚಲ ಪ್ರದೇಶದ ತವಾಂಗ್ ಗಡಿಯ ಬಳಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.
ಧುತ್ತರಗಾಂವ್ ಯೋಧ ವಾಪಸ್: ಹೆಂಡತಿಯ ಹೆರಿಗಾಗಿ ಬಂದಿದ್ದ ಆಳಂದ ತಾಲ್ಲೂಕಿನ ಧುತ್ತರಗಾಂವ್ ಮೂಲದ ಸಿಆರ್‌ಪಿಎಫ್‌ನ ಯೋಧ ಹಣಮಂತರಾಯ ಔಸೆ ಅವರು ಕರ್ತವ್ಯಕ್ಕೆ ಮರಳಿದ್ದಾರೆ. ಅವರ ಪತ್ನಿಗೆ ಗಂಡು ಮಗು ಜನಿಸಿದೆ.
ಒಂದು ತಿಂಗಳು ರಜೆ ಪಡೆದು ಕಳೆದ ಏಪ್ರಿಲ್ 25ರಂದು ಕಲಬುರಗಿಗೆ ಬಂದಿದ್ದರು. ಪತ್ನಿ, ಮಗುವಿನೊಂದಿಗೆ ಕಾಲ ಕಳೆಯಬೇಕಿದ್ದ ಯೋಧ ಹೈದ್ರಾಬಾದ್ ಮೂಲಕ ಜಮ್ಮುವಿಗೆ ತೆರಳಿದರು. ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದ ಗಡಿ ಭದ್ರತಾ ಪಡೆಯ ಯೋಧ ಸಿದ್ದಪ್ಪ ಅವರು ಕಲಬುರಗಿ ರೈಲು ನಿಲ್ದಾಣದಿಂದ ಸೇನೆಯ ತುರ್ತು ಕರೆಯ ಮೇರೆಗೆ ಪಶ್ಚಿಮ ಬಂಗಾಳಕ್ಕೆ ತೆರಳಿದರು.
‘ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಬಂದಾಗ ಸಾಮಾನ್ಯವಾಗಿ ಸೇನೆಯಿಂದ ಕರೆ ಬರುತ್ತದೆ. ಕಳೆದ 30ರಂದು ಮದುವೆಯಾಗಿದೆ. ಕರ್ತವ್ಯದ ಕರೆಗೆ ಓಗೊಟ್ಟು ದೆಹಲಿಗೆ ಹೊರಟು ಬಂದಿದ್ದೇನೆ. ಸದ್ಯ ಕೇಂದ್ರ ಸ್ಥಾನದಲ್ಲಿದ್ದು ಸೇನೆಯು ಎಲ್ಲಿ ನಿಯೋಜಿಸುತ್ತದೆಯೋ ಅಲ್ಲಿಗೆ ಹೋಗುತ್ತೇನೆ.–ತೂಗುದೀಪ ಕುಮಾರ್, ಯೋಧ ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.