ADVERTISEMENT

ಸೇಡಂ | ಭಾರತೀಯ ಸಂಸ್ಕೃತಿ ಉತ್ಸವ: ಹಿಂಗಾರು ಬಿತ್ತನೆ ತ್ಯಾಗ ಮಾಡಿದ ರೈತರು

ಅವಿನಾಶ ಬೋರಂಚಿ
Published 20 ಆಗಸ್ಟ್ 2024, 4:15 IST
Last Updated 20 ಆಗಸ್ಟ್ 2024, 4:15 IST
ಸೇಡಂ ನೀಲಹಳ್ಳಿ ಗ್ರಾಮದ ರೈತರ ಹೊಲದಲ್ಲಿ ಸದ್ಯ ಹೆಸರು ಬೆಳೆ ಇರುವುದು
ಸೇಡಂ ನೀಲಹಳ್ಳಿ ಗ್ರಾಮದ ರೈತರ ಹೊಲದಲ್ಲಿ ಸದ್ಯ ಹೆಸರು ಬೆಳೆ ಇರುವುದು   

ಸೇಡಂ: ತಾಲ್ಲೂಕಿನ ನೀಲಹಳ್ಳಿ-ಕೊಂಕನಳ್ಳಿ ಮತ್ತು ಬೀರನಳ್ಳಿ ಗ್ರಾಮಗಳ ಮಧ್ಯೆ 2025ರ ಜನವರಿ 29 ರಿಂದ ಫೆ.6ರವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ-7 ಮತ್ತು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ ಕಾರ್ಯಕ್ರಮಕ್ಕೆ ರೈತರು ಐತಿಹಾಸಿಕ ಸಹಕಾರ ನೀಡುತ್ತಿದ್ದಾರೆ.

ನೀಲಹಳ್ಳಿ, ಕೊಂಕನಳ್ಳಿ ಮತ್ತು ಬೀರನಳ್ಳಿ ಗ್ರಾಮದ ಮಧ್ಯೆ ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಸುಮಾರು 40ಕ್ಕೂ ಅಧಿಕ ರೈತರು ಹಿಂಗಾರು ಬಿತ್ತನೆ ಮಾಡದಿರಲು ನಿರ್ಧರಿಸಿದ್ದಾರೆ. ಮೂರೂ ಊರಿನ ರೈತರು 240 ಎಕರೆ ಪ್ರದೇಶದಲ್ಲಿ ಸ್ವಯಂ ಪ್ರೇರಿತವಾಗಿ ಬಿತ್ತನೆ ತ್ಯಾಗ ಮಾಡಿದ್ದಾರೆ.

‘ಸ್ವರ್ಣ ಜಯಂತಿ ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಹೊಲಗಳನ್ನು ಬಳಸಿಕೊಳ್ಳುವಂತೆ ಒಕ್ಕೋರಲಿನ ಸಹಕಾರ ನೀಡಿದ್ದು, ಸೇಡಂ ಇತಿಹಾಸದಲ್ಲಿ ಐತಿಹಾಸಿಕವಾಗಿ ದಾಖಲೆಯಾಗುತ್ತಿದೆ ಎನ್ನುತ್ತಾರೆ’ ಸ್ವರ್ಣ ಜಯಂತಿ ಕಾರ್ಯಸ್ಥಳದ ಪ್ರಮುಖರಾದ ಭಗಂತರಾವ ಪಾಟೀಲ ಕೊಂಕನಳ್ಳಿ.

ADVERTISEMENT

‘ಒಂದು ಎಕರೆಯಿಂದ ಮೊದಲ್ಗೊಂಡು, 5 ಎಕರೆ, 10 ಎಕರೆ, 20 ಎಕರೆ ಜಮೀನು ಹೊಂದಿರುವ ರೈತರು ಇದರಲ್ಲಿ ಪಾಲುದಾರರಾಗುತ್ತಿರುವುದು ಶ್ರೇಷ್ಠತನಕ್ಕೆ ಸಾಕ್ಷಿಯಾಗುತ್ತಿದೆ. ಕಾರ್ಯಕ್ರಮದ ಪ್ರಮುಖರು ಇದಕ್ಕೆ ಗೌರವಧನ ನೀಡುತ್ತಿದ್ದರೂ ಕೆಲ ರೈತರು ನಿರಾಕರಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ.

‘ಬಸವರಾಜ ಪಾಟೀಲ ಸೇಡಂ ಕಲ್ಯಾಣ ಕರ್ನಾಟಕ ಭಾಗದ ಶ್ರೇಷ್ಠ ಚಿಂತಕ. ಅವರ ನೇತೃತ್ವದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ ಎನ್ನುವುದೇ ನಮಗೆ ಅದೃಷ್ಟ. ಅದು ನಮ್ಮೂರಿನ ಗ್ರಾಮದ ಸೀಮೆಯನ್ನು ಆಯ್ಕೆ ಮಾಡಿಕೊಂಡಿರುವುದು ಬಹುದೊಡ್ಡ ಸೌಭಾಗ್ಯ. ಇಂತಹ ಶ್ರೇಷ್ಠತೆಯಲ್ಲಿ ನಮ್ಮದೊಂದು ಪಾಲಿನ ಸಹಕಾರವಿರುತ್ತದೆ ಎನ್ನುವ ಅಭಿಮತ ಮೂರೂ ಊರಿನ ಗ್ರಾಮದ ರೈತರು ಒಕ್ಕೋರಲಿನ ನಿರ್ಧಾರಕ್ಕೆ ಬಂದಿದ್ದಾರೆ. 

ಸದಾಶಿವ ಸ್ವಾಮೀಜಿ
ಪಾಟೀಲಜೀ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಯಶಸ್ಸಿಗೆ ಸಾವಿರಾರು ಜನರ ತನು ಮನ ಮತ್ತು ಧನದ ಸಹಕಾರ ನೀಡುತ್ತಿದ್ದಾರೆ. ವಿಶೇಷವಾಗಿ ಕಾರ್ಯಕ್ಕೆ ಭೂಮಿ ನೀಡಿದ ರೈತರ ಸಹಕಾರ ಅತ್ಯಂತ ಹಿರಿದಾಗಿದ್ದು ಸ್ಮರಣೀಯವಾಗಿದೆ
ಸದಾಶಿವ ಸ್ವಾಮೀಜಿ ಅಧ್ಯಕ್ಷ ಕೊ.ಬ.ಭಾ.ಶಿ.ಸಮಿತಿ
ಭಗವಂತರಾವ ಪಾಟೀಲ
ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿರುವುದು ಅತೀವ ಸಂತಸ. ಈ ಕಾರ್ಯಕ್ರಮದಲ್ಲಿ ನಾನು 15 ಗ್ರಾಮಗಳ ಪ್ರಮುಖನಾಗಿ ಸೇವೆ ಸಲ್ಲಿಸುತ್ತಿರುವ ಖುಷಿಯಿದೆ
ಭಗವಂತರಾವ ಪಾಟೀಲ ಸ್ವರ್ಣ ಜಯಂತಿ ಕಾರ್ಯಸ್ಥಳ ಪ್ರಮುಖ
ಜಗದೇವಿ ಮಡಿವಾಳ
ದೇಶದ ಜನತೆಯ ಗಮನ ಸೆಳೆಯುವ ಬಹುದೊಡ್ಡ ಕಾರ್ಯಕ್ರಮ ನಡೆಯುತ್ತಿದೆ ಎನ್ನುವುದೇ ಹೆಮ್ಮೆ. ಸದಾಶಿವ ಸ್ವಾಮೀಜಿ ಅವರ ಸಾನ್ನಿಧ್ಯದ ಮೇರೆಗೆ ಕಾರ್ಯಸ್ಥಳಕ್ಕೆ ಭೂಮಿ ನೀಡಿರುವ ಸಂತಸವಿದೆ
ಜಗದೇವಿ ಮಡಿವಾಳ ರೈತ ಮಹಿಳೆ ನೀಲಹಳ್ಳಿ
ದೇಶ ಹೆಮ್ಮೆಪಡುವಂತಹ ಕಾರ್ಯಕ್ರಮವು ನಮ್ಮೂರಿನಲ್ಲಿ ನಡೆಯುತ್ತಿರುವ ಖುಷಿಯಿದೆ. ಇದರಿಂದ ನಮ್ಮೂರು ಸಾಮಾಜಿಕವಾಗಿ ಪ್ರಗತಿ ಸಾಧಿಸಲಿದ್ದು ಬಹುದೊಡ್ಡ ಕಾರ್ಯಕ್ರಮಕ್ಕೆ ನಮ್ಮ ಕೊಡುಗೆ ಇರಲಿದೆ ಎಂಬ ಹೆಮ್ಮೆ ನಮಗೆ
ಮಲ್ಲಿಕಾರ್ಜುನ ಕುಲಕರ್ಣಿ ರೈತಕೊಂಕನಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.