ADVERTISEMENT

ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ: ಅನುದಾನಕ್ಕಾಗಿ ಕಾಯುತ್ತಿರುವ 347 ದಂಪತಿ!

3 ವರ್ಷಗಳಲ್ಲಿ 680 ಅರ್ಜಿ ಸಲ್ಲಿಕೆ, 297 ವಿಲೇವಾರಿ

ಮಲ್ಲಿಕಾರ್ಜುನ ನಾಲವಾರ
Published 16 ಜುಲೈ 2024, 5:07 IST
Last Updated 16 ಜುಲೈ 2024, 5:07 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಕಲಬುರಗಿ: ಹಿಂದುಳಿದ ವರ್ಗಗಳಿಗೆ ಆರ್ಥಿಕವಾಗಿ ನೆರವಾಗಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿದ ಅಂತರ್ಜಾತಿ ವಿವಾಹ ಯೋಜನೆಯ ಪ್ರೋತ್ಸಾಹ ಧನಕ್ಕೆ ಸಲ್ಲಿಕೆಯಾದ ಅರ್ಜಿಗಳಿಗೆ ಬೇಡಿಕೆಯಷ್ಟು ಅನುದಾನ ಬಿಡುಗಡೆ ಆಗುತ್ತಿಲ್ಲ. ದಾಂಪತ್ಯದ ಹೊಸ ಬದುಕಿಗೆ ಆಸರ ಆಗುತ್ತಿದೆ ಎಂದುಕೊಂಡು ಅರ್ಜಿ ಸಲ್ಲಿಸಿದವರಿಗೆ ನಿರಾಸೆಯಾಗುತ್ತಿದೆ.

ಸಮಾಜದಲ್ಲಿ ಜಾತಿ ಪ್ರತಿಷ್ಠೆಯ ನಡುವೆ ಅಂತರ್ಜಾತಿ ವಿವಾಹವಾಗಿರುವ ಬಹುತೇಕರು ಕುಟುಂಬದವರನ್ನು ಎದುರು ಹಾಕಿಕೊಳ್ಳುತ್ತಾರೆ. ಅವರ ದಾಂಪತ್ಯದ ಬದುಕಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಿ ನೆರವಾಗಬೇಕಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಕೆಯಾದ ಅರ್ಜಿಗಳಿಗೆ ಅನುದಾನ ಬರುತ್ತಿಲ್ಲ ಎಂಬ ಬೇಸರ ಅರ್ಜಿದಾರರದ್ದು.

ಕಳೆದ ಮೂರು ವರ್ಷಗಳಲ್ಲಿ ಅಂತರ್ಜಾತಿ ವಿವಾಹ ಯೋಜನೆಯ ಪ್ರೋತ್ಸಾಹ ಧನ ಕೋರಿ 680 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ಪೈಕಿ ಅಪೂರ್ಣ ಮಾಹಿತಿಗೆ 14 ಹಾಗೂ ತಾಂತ್ರಿಕ ಕಾರಣಗಳಿಗೆ 22 ಅರ್ಜಿಗಳು ತಿರಸ್ಕೃತವಾಗಿದ್ದು, 297 ಅರ್ಜಿದಾರರಿಗೆ ಮಾತ್ರವೇ ಪ್ರೋತ್ಸಾಹ ಧನ ಸಿಕ್ಕಿದೆ. 347 ಅರ್ಜಿದಾರರು ಪ್ರೋತ್ಸಾಹ ಧನಕ್ಕಾಗಿ ಎದುರು ನೋಡುತ್ತಿದ್ದಾರೆ.

ADVERTISEMENT

ಸಲ್ಲಿಕೆಯಾದ ಅರ್ಜಿಗಳಲ್ಲಿ ಅತ್ಯಧಿಕ ಅರ್ಜಿಗಳು ಕಲಬುರಗಿಯಿಂದಲೇ (348) ಸಲ್ಲಿಕೆಯಾಗಿವೆ. ನಂತರದ ಸ್ಥಾನದಲ್ಲಿ ಚಿಂಚೋಳಿ (136), ಚಿತ್ತಾಪುರ (75), ಆಳಂದ (51), ಸೇಡಂ (28), ಜೇವರ್ಗಿ (27) ಹಾಗೂ ಅಫಜಲಪುರ ತಾಲ್ಲೂಕಿನಿಂದ (15) ಬಂದಿವೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಮೂರು ವರ್ಷಗಳ ಅವಧಿಯಲ್ಲಿ ₹ 9.26 ಕೋಟಿ ಮಂಜೂರಾಗಿದ್ದು, 297 ಫಲಾನುಭವಿಗಳಿಗೆ ₹ 9.14 ಕೋಟಿ ಖರ್ಚು ಮಾಡಲಾಗಿದೆ. ಕಳೆದ ಫೆಬ್ರುವರಿಯಿಂದ ಇಲ್ಲಿಯವರೆಗೆ 7 ಅರ್ಜಿಗಳು ಬಂದಿದ್ದು, ₹14 ಲಕ್ಷದಷ್ಟು ಅನುದಾನ ಇದೆ. ಅನುದಾನ ಬಿಡುಗಡೆಯಾದಂತೆ ಬಾಕಿ ಉಳಿದಿರುವ ಅರ್ಜಿಗಳ ಪೈಕಿ ಜ್ಯೇಷ್ಠತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಕೇಸ್‌ ವರ್ಕರ್ ರೇಣುಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂತರ್ಜಾತಿ ವಿವಾಹ ಯೋಜನೆಯಡಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಹಿಂದೂ ಧರ್ಮದ ಇತರೆ ಜಾತಿ ಪುರುಷ ಮದುವೆಯಾಗಿದ್ದಲ್ಲಿ ಅಂತಹ ದಂಪತಿಗೆ ₹3 ಲಕ್ಷ ಹಾಗೂ ಪರಿಶಿಷ್ಟ ಜಾತಿಯ ಪುರುಷ ಇತರೆ ಹಿಂದೂ ಧರ್ಮದ ಇತರೆ ಜಾತಿಯ ಮಹಿಳೆಯನ್ನು ಮದುವೆಯಾಗಿದ್ದಲ್ಲಿ ₹2.50 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ. ಪ್ರೋತ್ಸಾಹದ ಧನಕ್ಕೆ ಆಯ್ಕೆಯಾದ ದಂಪತಿಗೆ ಶೇ 50ರಷ್ಟು ಹಣ ನಗದು ರೂಪದಲ್ಲಿ ನೀಡಿದ್ದರೆ ಉಳಿದ ಶೇ 50ರಷ್ಟು ಹಣ ಮೂರು ವರ್ಷಗಳ ಅವಧಿಗೆ ಠೇವಣಿ ಇರಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ಒಳಪಂಗಡ ವಿವಾಹ ಯೋಜನೆಯಡಿ ಪರಿಶಿಷ್ಟ ಜಾತಿಯ ಇತರೆ ಒಳಪಂಗಡಗಳಲ್ಲಿ ವಿವಾಹವಾದಲ್ಲಿ ಹಾಗೂ ಪರಿಶಿಷ್ಟ ಪಂಗಡದವರು ಇತರೆ ಒಳ ಪಂಗಡದಲ್ಲಿ ವಿವಾಹದಲ್ಲಿ ಅಂತಹ ದಂಪತಿಗೆ ₹2 ಲಕ್ಷ ಪ್ರೋತ್ಸಾಹ ಧನ ಕೊಡಲಾಗುತ್ತದೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾದ ಪರಿಶಿಷ್ಟ ಜಾತಿಯ ದಂಪತಿಗೆ ₹50 ಸಾವಿರ, ಮದುವೆ ಮಾಡುವ ಸಂಘ/ ಸಂಸ್ಥೆಯವರಿಗೆ ಪ್ರತಿ ದಂಪತಿಗೆ ₹20 ಸಾವಿರ ಪ್ರೋತ್ಸಾಹ ಧನ ಸಮಾಜ ಕಲ್ಯಾಣ ಇಲಾಖೆ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಮಾನದಂಡಗಳು ಏನು?

ಅಂತರ್ಜಾತಿ ವಿವಾಹ ಯೋಜನೆಯಡಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಹಿಂದೂ ಧರ್ಮದ ಇತರೆ ಜಾತಿ ಪುರುಷ ಮದುವೆಯಾಗಿದ್ದಲ್ಲಿ ಅಂತಹ ದಂಪತಿಗೆ ₹3 ಲಕ್ಷ ಹಾಗೂ ಪರಿಶಿಷ್ಟ ಜಾತಿಯ ಪುರುಷ ಇತರೆ ಹಿಂದೂ ಧರ್ಮದ ಇತರೆ ಜಾತಿಯ ಮಹಿಳೆಯನ್ನು ಮದುವೆಯಾಗಿದ್ದಲ್ಲಿ ₹2.50 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ. ಪ್ರೋತ್ಸಾಹದ ಧನಕ್ಕೆ ಆಯ್ಕೆಯಾದ ದಂಪತಿಗೆ ಶೇ 50ರಷ್ಟು ಹಣ ನಗದು ರೂಪದಲ್ಲಿ ನೀಡಿದರೆ ಉಳಿದ ಶೇ 50ರಷ್ಟು ಹಣ ಮೂರು ವರ್ಷಗಳ ಅವಧಿಗೆ ಠೇವಣಿ ಇರಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ಒಳಪಂಗಡ ವಿವಾಹ ಯೋಜನೆಯಡಿ ಪರಿಶಿಷ್ಟ ಜಾತಿಯ ಇತರೆ ಒಳಪಂಗಡಗಳಲ್ಲಿ ವಿವಾಹವಾದಲ್ಲಿ ಹಾಗೂ ಪರಿಶಿಷ್ಟ ಪಂಗಡದವರು ಇತರೆ ಒಳ ಪಂಗಡದಲ್ಲಿ ವಿವಾಹವಾದರೆ ದಂಪತಿಗೆ ₹2 ಲಕ್ಷ ಪ್ರೋತ್ಸಾಹ ಧನ ಕೊಡಲಾಗುತ್ತದೆ.

ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ (₹ ಕೋಟಿಯಲ್ಲಿ) ವರ್ಷ;ಮಂಜೂರು;ಖರ್ಚು;ಫಲಾನುಭವಿಗಳು 2021–22;3.62;3.58;120 2022–23;2.55;2.50;75 2023–24;3.09;3.06;102 ಒಟ್ಟು;9.26;9.14;297 ಆಧಾರ: ಸಮಾಜ ಕಲ್ಯಾಣ ಇಲಾಖೆ

ಒಳಪಂಗಡ ದಂಪತಿಗಳಿಗೆ ನೀಡಿದ ಪ್ರೋತ್ಸಾಹ ಧನ (₹ ಲಕ್ಷದಲ್ಲಿ) ವರ್ಷ;ಮಂಜೂರು;ಖರ್ಚು;ಫಲಾನುಭವಿಗಳು 2021–22;52;52;33 2022–23;86;86;48 2023–24;64;64;36 ಒಟ್ಟು;2.02;2.02;117

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.