ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ರಚಿಸಿದ್ದ ‘ಶಿಕ್ಷಣ ತಜ್ಞರ ಸಮಿತಿ’ಯು ತನ್ನ ಮಧ್ಯಂತರ ವರದಿಯನ್ನು ಸೋಮವಾರ ಸಲ್ಲಿಸಿದೆ. ಕಲಬುರಗಿ ವಿಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದ್ಯತೆ ಕೊಡುವಂತೆ ಶಿಕ್ಷಣ ಇಲಾಖೆಗೆ ಒತ್ತಿ ಹೇಳಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಆಯುಕ್ತರಿಗೆ 41 ಪುಟಗಳ ಮಧ್ಯಂತರ ವರದಿಯ ಪ್ರತಿಗಳನ್ನು ಅರ್ಥಶಾಸ್ತ್ರಜ್ಞೆ ಛಾಯಾ ದೇಗಾಂವಕರ್ ನೇತೃತ್ವದ ಸಮಿತಿ ಸಲ್ಲಿಸಿದೆ. ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ತಕ್ಷಣದ ಅಲ್ಪಾವಧಿ, ಅಲ್ಪಾವಧಿ ಹಾಗೂ ಮಧ್ಯಮ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ 50ಕ್ಕೂ ಹೆಚ್ಚು ಅಂಶಗಳನ್ನು ಶಿಫಾರಸು ಮಾಡಿದೆ.
ತಕ್ಷಣದ ಅಲ್ಪಾವಧಿ ಶಿಫಾರಸುಗಳು: ಎಸ್‌ಎಸ್‌ಎಲ್‌ಸಿಯಲ್ಲಿ ಶೇ 40ಕ್ಕೂ ಕಡಿಮೆ ಫಲಿತಾಂಶ ಪಡೆದ ಶಾಲೆಗಳಲ್ಲಿ ಹೆಚ್ಚುವರಿ ತರಗತಿ ನಡೆಸಲು ನಿರ್ದೇಶನ ನೀಡಬೇಕು. ಕಡಿಮೆ ಕಾರ್ಯಕ್ಷಮತೆಯ ವಿಷಯಗಳು ಮತ್ತು ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಬೇಕು. ಕಲಿಕಾ ಚಟುವಟಿಕೆಗಳು, ಅಸೈನ್‌ಮೆಂಟ್, ಮೌಲ್ಯಮಾಪನ ಮತ್ತು ಕಾರ್ಯಕ್ಷಮತೆಯ ಬಗ್ಗೆ ಡಿಡಿಪಿಐ ವಾರಕ್ಕೊಮ್ಮೆ ವರದಿಯನ್ನು ತರಿಸಿಕೊಂಡು ಪರಿಶೀಲಿಸಬೇಕು. ಕಳಪೆ ಕಾರ್ಯಕ್ಷಮತೆ ಹೊಂದಿರುವ ಬಿಇಒಗಳ ಮೇಲೆ ನಿಗಾ ಇರಿಸಿ, ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಶಿಫಾರಸು ಮಾಡಿದೆ.
ಅಲ್ಪಾವಧಿ ಶಿಫಾರಸುಗಳು: ಬೋಧನಾ ಚಟುವಟಿಕೆಗಳ ಮೇಲೆ ನಿಗಾ ಇರಿಸಿ, ಮೇಲ್ವಿಚಾರಣೆ ಮಾಡಲು 14 ಹೊಸ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳನ್ನು (ಬಿಇಒ) ಸ್ಥಾಪಿಸಬೇಕು. ಈಗಿರುವ 34 ಬಿಇಒಗಳ ವ್ಯಾಪ್ತಿ, ಶಾಲೆಗಳು ಮತ್ತು ಭೌಗೋಳಿಕ ಅಂತರದ ಅಂಶಗಳನ್ನು ಪರಿಗಣಿಸಬೇಕು ಎಂದಿದೆ.
ಕಲಬುರಗಿ ವಿಭಾಗದಲ್ಲಿ 17,274 (ಶೇ 38.2 ) ಪ್ರಾಥಮಿಕ ಹಾಗೂ 4,107 (ಶೇ 34.8) ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ವಿಷಯವಾರು ಶಿಕ್ಷಕರ ಕೊರತೆ ಮತ್ತು ಅತಿಥಿ ಶಿಕ್ಷಕರ ಕಳಪೆ ಗುಣಮಟ್ಟದ ಬೋಧನೆಯಿಂದಾಗಿ ಮಕ್ಕಳ ಕಲಿಕಾ ಕಾರ್ಯಕ್ಷಮತೆ ಕುಸಿದಿದ್ದು, ಅವರ ಭವಿಷ್ಯವೂ ಅಪಾಯಕ್ಕೆ ಸಿಲುಕಿದೆ. ಹೀಗಾಗಿ, ಆದ್ಯತೆಯ ಮೇಲೆ ಕಲಬುರಗಿ ವಿಭಾಗದಲ್ಲಿ ಬಡ್ತಿ ನೀಡಿ, ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಿ ಹೇಳಿದೆ.
ಕೆಕೆಆರ್‌ಡಿಬಿಯ ಅಕ್ಷರ ಆವಿಷ್ಕಾರವು ಮಕ್ಕಳ ಶಿಕ್ಷಣ, ಜ್ಞಾನ ಮತ್ತು ಕೌಶಲಗಳಲ್ಲಿ ಪರಿವರ್ತನೆ ತರಲಿದೆ. ಹೀಗಾಗಿ, ಅಕ್ಷರ ಆವಿಷ್ಕಾರವನ್ನು ಮುಂದುವರಿಸಿ, ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಯೋಜನಾ ನಿರ್ವಹಣಾ ಘಟಕವನ್ನು (ಪಿಎಂಯು) ಸ್ಥಾಪಿಸಬೇಕು ಎಂದು ಸೂಚಿಸಿದೆ.
ಶೇ 61.35ರಷ್ಟು ಬಡ ಮಕ್ಕಳು
ಸರ್ಕಾರಿ ಶಾಲೆಯಲ್ಲಿ ಕಲಿಕೆ ಕಲ್ಯಾಣ ಕರ್ನಾಟಕದ ಬಡ ಕುಟುಂಬಗಳ ಶೇ 61.35ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಹೀಗಾಗಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗಳನ್ನು ಸುಧಾರಣೆ ಮಾಡಬೇಕು. ಎರಡು ವರ್ಷಗಳಲ್ಲಿ 200 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತಂದು ಬ್ರಿಡ್ಜ್ ಕೋರ್ಸ್‌ಗಳ ಮೂಲಕ ಮುಖ್ಯವಾಹಿನಿಗೆ ತರಬೇಕು. ಶಾಲಾ ನಿರ್ವಹಣಾ ಸಮಿತಿಗಳಿಗೆ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಬಗ್ಗೆ ತರಬೇತಿ ನೀಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಡಿಡಿಪಿಐ ಆಯುಕ್ತರ ಕಚೇರಿಯಲ್ಲಿ ಕಾನೂನು ಸೆಲ್ ಅಥವಾ ವಕೀಲರ ಸಮಿತಿ ಸ್ಥಾಪಿಸಲು ಪ್ರಸ್ತಾವ ಸಲ್ಲಿಸಬೇಕು. ಕಲಿಕೆಯ ಫಲಿತಾಂಶ ಸುಧಾರಣೆಗೆ ಬಿಇಒಗಳು ಪ್ರತಿ ಶಾಲೆಗೆ ನಿರ್ದಿಷ್ಟ ಗುರಿಗಳನ್ನು ನೀಡಬೇಕು. ಅದರ ಜವಾಬ್ದಾರಿಯನ್ನು ಮುಖ್ಯಶಿಕ್ಷಕರು ಶಿಕ್ಷಕರು ಆಯಾ ಬಿಆರ್‌ಸಿ ಸಿಆರ್‌ಸಿಗಳಿಗೆ ವಹಿಸಬೇಕು ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.