ADVERTISEMENT

ಬೌದ್ಧಿಕ ವಿಕಾಸಕ್ಕಿಂತ ಆಂತರಿಕ ವಿಕಾಸ ಮುಖ್ಯ: ಬಸವರಾಜ ಪಾಟೀಲ ಸೇಡಂ

‘ಮುದ್ದುರಾಮ ಮಂಜರಿ’ ಕೃತಿ ಜನಾರ್ಪಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:54 IST
Last Updated 29 ಡಿಸೆಂಬರ್ 2025, 5:54 IST
ಕಲಬುರಗಿಯ ಕೆಕೆಸಿಸಿಐ ಸಂಭಾಗಣದಲ್ಲಿ ಮುದ್ದುರಾಮ ಮಂಜರಿ ಕೃತಿಯನ್ನು ಬಸವರಾಜ ದೇಶಮುಖ ಜನಾರ್ಪಣೆಗೊಳಿಸಿದರು. ಬಸವರಾಜ ಪಾಟೀಲ ಸೇಡಂ, ಬಸವರಾಜ ಕೊನೇಕ್‌, ಕೆ.ಸಿ.ಶಿವಪ್ಪ, ಗುರುರಾಜ ಕರಜಗಿ, ಎನ್‌.ಎಂ. ತಳವಾರ ಉಪಸ್ಥಿತರಿದ್ದರು
ಕಲಬುರಗಿಯ ಕೆಕೆಸಿಸಿಐ ಸಂಭಾಗಣದಲ್ಲಿ ಮುದ್ದುರಾಮ ಮಂಜರಿ ಕೃತಿಯನ್ನು ಬಸವರಾಜ ದೇಶಮುಖ ಜನಾರ್ಪಣೆಗೊಳಿಸಿದರು. ಬಸವರಾಜ ಪಾಟೀಲ ಸೇಡಂ, ಬಸವರಾಜ ಕೊನೇಕ್‌, ಕೆ.ಸಿ.ಶಿವಪ್ಪ, ಗುರುರಾಜ ಕರಜಗಿ, ಎನ್‌.ಎಂ. ತಳವಾರ ಉಪಸ್ಥಿತರಿದ್ದರು   

ಕಲಬುರಗಿ: ‘ಬೌದ್ಧಿಕ ವಿಕಾಸಕ್ಕಿಂತ ಆಂತರಿಕ ವಿಕಾಸ ಮುಖ್ಯ. ಪ್ರಸ್ತುತ ದೇಶ ಭೌತಿಕವಾಗಿ ಸಾಕಷ್ಟು ಬೆಳವಣಿಗೆ ಹೊಂದಿದೆ. ಆದರೆ ಮಾನವೀಯ ಸಂಬಂಧ ಮತ್ತು ಆಂತರಿಕ ವಿಕಾಸ ಪಾತಾಳಕ್ಕೆ ಕುಸಿದಿದೆ’ ಎಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು.

ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ವಿಕಾಸ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ದಾರ್ಶನಿಕ ಕವಿ ಕೆ.ಸಿ.ಶಿವಪ್ಪ ಅವರ ‘ಮುದ್ದುರಾಮ ಮಂಜರಿ’ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿ ಹೆಜ್ಜೆಯಲ್ಲೂ ಎಚ್ಚರಿಸಿ ಮನುಷ್ಯನಾಗಿ ಬಾಳು ಎಂದು ಹೇಳಿಕೊಡುವ ಡಿ.ವಿ. ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗ ಒಂದು ಶ್ರೇಷ್ಠ ಕೃತಿ. ಅದಾದಮೇಲೆ ಎರಡನೇ ಅಂತಹ ಅಮೂಲ್ಯವಾದ ಕೃತಿ ಕೆ.ಸಿ. ಶಿವಪ್ಪ ಅವರ ಚೌಪದಿಗಳು. ಕಗ್ಗ ಹಳೆಗನ್ನಡದಲ್ಲಿದೆ, ಆದರೆ ಚೌಪದಿಗಳು ಸರಳವಾಗಿ ಅರ್ಥೈಸಿಕೊಳ್ಳುವ ಭಾಷೆಯಲ್ಲಿದೆ. ಹೀಗಾಗಿ ಇದನ್ನು ಕಲ್ಯಾಣ ಕರ್ನಾಟಕದ ಜನರ ಮನೆಯ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿ, ‘ಕೆ.ಸಿ. ಶಿವಪ್ಪ ಅವರು ಇವರೆಗೆ 13 ಸಾವಿರ ಚೌಪದಿ, 10 ಕೃತಿ ಮತ್ತು 1500 ಭಾವಗೀತೆ ರಚಿಸಿದ್ದಾರೆ. ಈ ಪೈಕಿ 1008 ಚೌಪದಿಗಳನ್ನು ಆಯ್ದುಕೊಂಡು ಈ ಕೃತಿ ತಯಾರಿಸಲಾಗಿದೆ. ಅಲ್ಲದೆ ಪ್ರಸಕ್ತವಾಗಿ ಪುಸ್ತಕ ಮಾಧ್ಯಮಕ್ಕಿಂತ ದೃಶ್ಯ ಹಾಗೂ ಶ್ರವ್ಯ ಮಾಧ್ಯಮ ಹೆಚ್ಚು ಪ್ರಭಾವಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಇವುಗಳನ್ನು ಕಥೆ, ಹಾಡುಗಳ ರೂಪದಲ್ಲಿ ಭಾವಾರ್ಥ ಸಹಿತವಾಗಿ ವಿಡಿಯೊಗಳನ್ನು ಮಾಡಲಾಗುತ್ತದೆ’ ಎಂದರು.

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ ಹಾಗೂ ಭಾರತೀಯ ಭಾಷಾ ಸಂಸ್ಥಾನದ ಯೋಜನಾ ನಿರ್ದೇಶಕ ಎನ್.ಎಂ. ತಳವಾರ ಮಾತನಾಡಿ, ‘ಕೆ.ಸಿ. ಶಿವಪ್ಪ ಅವರು ಈ ಪುಸ್ತಕದಿಂದ ಬಂದ ವರಮಾನವನ್ನು ಮುದ್ದುರಾಮ ಪ್ರತಿಷ್ಠಾನಕ್ಕೆ ನೀಡುತ್ತಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಮುದ್ದುರಾಮ ಬಳಗ ರಚಿಸಿ ಸಾಮಾಜಿಕ ಮತ್ತು ಸಾಹಿತ್ಯದ ಕಾರ್ಯಗಳನ್ನು ಮಾಡುತ್ತೇವೆ’ ಎಂದು ತಿಳಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ ಕೊನೇಕ್‌ ಮಾತನಾಡಿದರು. ಈ ಸಂದರ್ಭದಲ್ಲಿ ನವದೆಹಲಿಯ ಆಯುರ್ವೇದ ಮಂಡಳಿಯ ಎನ್‌ಸಿಐಎಸ್‌ಎಂ ಅಧ್ಯಕ್ಷರಾಗಿ ನೇಮಕಗೊಂಡ ಡಾ. ಅಲ್ಲಮಪ್ರಭು ಗುಡ್ಡದ ಅವರನ್ನು ಸನ್ಮಾನಿಸಲಾಯಿತು.

ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಆರ್‌ಆರ್‌ಎಸ್‌ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ, ಜಿ.ಎಂ. ವಿಜಯಕುಮಾರ, ಶಾಂತರೆಡ್ಡಿ, ಅಶೋಕ ಜಿವಣಗಿ, ಶಂಕರ ಸುಲೆಗಾಂವ, ಪತ್ರಕರ್ತ ಪ್ರಭಾಕರ ಜೋಶಿ ಉಪಸ್ಥಿತರಿದ್ದರು.

ಉಮೇಶ ಶೆಟ್ಟಿ ಸ್ವಾತಸಿದರು. ಕಿರಣ ಪಾಟೀಲ ಪ್ರಾರ್ಥಿಸಿದರು. ಮಾರ್ತಾಂಡ ಶಾಸ್ತ್ರೀ ವಂದಿಸಿದರು.

ಸಿದ್ಧೇಶ್ವರ ಶ್ರೀಗಳ ಪ್ರಭಾವ

‘ಮೈಸೂರಿನಲ್ಲಿ ಹುಟ್ಟಿ ಬೆಳೆದ ನಾನು ಒಬ್ಬ ಸರ್ಕಾರಿ ಅಧಿಕಾರಿಯಾಗಿ ಪ್ರೇಮಕವಿಯಾಗಿ ಗುರುತಿಸಿಕೊಂಡು 1500ಕ್ಕೂ ಅಧಿಕ ಭಾವಗೀತೆಗಳನ್ನು ಬರೆದಿದ್ದೆ. ಅವುಗಳಲ್ಲಿ ಸಾಕಷ್ಟು ಗೀತೆಗಳು ಚಲನಚಿತ್ರಗಳಲ್ಲಿ ಮೂಡಿಬಂದವು. ಆದರೇ 1998 ರಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಸಂಪರ್ಕಕ್ಕೆ ಬಂದ ನಂತರ ಕೋಟು ಧರಿಸಿವುದನ್ನು ನಿಲ್ಲಿಸಿ ಚೌಪದಿಗಳ ರಚನೆ ಪ್ರಾರಂಭಿಸಿದೆ’ ಎಂದು ಮುದ್ದುರಾಮ ಮಂಜರಿ ಲೇಖಕ ಕೆ.ಸಿ. ಶಿವಪ್ಪ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.