ADVERTISEMENT

ಉನ್ನತ ಶಿಕ್ಷಣದ ಬೆಳವಣಿಗೆಗೆ ಖಾಲಿ ಹುದ್ದೆ ಅಡ್ಡಿ: ಡಾ.ಎಸ್. ಮಾದೇಶ್ವರನ್ ಬೇಸರ

ಘಟಿಕೋತ್ಸವ ಭಾಷಣ ಮಾಡಿದ ಐಸೆಕ್ ನಿರ್ದೇಶಕ ಡಾ.ಎಸ್. ಮಾದೇಶ್ವರನ್ ಬೇಸರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 21:17 IST
Last Updated 20 ನವೆಂಬರ್ 2020, 21:17 IST
ಘಟಿಕೋತ್ಸವದಲ್ಲಿ ಗುಲಬರ್ಗಾ ವಿ.ವಿ. ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಕುಲಸಚಿವ (ಆಡಳಿತ) ಪ್ರೊ.ಸಿ.ಸೋಮಶೇಖರ್, ಕುಲಸಚಿವ (ಮೌಲ್ಯಮಾಪನ) ಪ್ರೊ.ಸಂಜೀವಕುಮಾರ್ ಎಂ. ಹಾಗೂ ವಿವಿಧ ನಿಕಾಯಗಳ ಡೀನರು ಇದ್ದರು
ಘಟಿಕೋತ್ಸವದಲ್ಲಿ ಗುಲಬರ್ಗಾ ವಿ.ವಿ. ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಕುಲಸಚಿವ (ಆಡಳಿತ) ಪ್ರೊ.ಸಿ.ಸೋಮಶೇಖರ್, ಕುಲಸಚಿವ (ಮೌಲ್ಯಮಾಪನ) ಪ್ರೊ.ಸಂಜೀವಕುಮಾರ್ ಎಂ. ಹಾಗೂ ವಿವಿಧ ನಿಕಾಯಗಳ ಡೀನರು ಇದ್ದರು   

ಕಲಬುರ್ಗಿ: ‘ವಿಶ್ವವಿದ್ಯಾಲಯಗಳಲ್ಲಿ ಅಗತ್ಯವಿರುವಷ್ಟು ಪ್ರಾಧ್ಯಾಪಕರ ಹುದ್ದೆ ನೀಡದಿರುವುದು ಹಾಗೂ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡದಿರುವುದೂ ಉನ್ನತ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾಗಿದೆ’ ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ (ಐಸೆಕ್) ನಿರ್ದೇಶಕ ಡಾ.ಎಸ್.ಮಾದೇಶ್ವರನ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ನಡೆದ 38ನೇ ಘಟಿಕೋತ್ಸವದ ಆನ್‌ಲೈನ್ ಮೂಲಕ ‘ಭಾರತದಲ್ಲಿ ಉನ್ನತ ಶಿಕ್ಷಣದ ಸಾಮರ್ಥ್ಯ, ಅವಕಾಶ, ಉದ್ಯೋಗ ಮತ್ತು ಗುಣಾತ್ಮಕತೆ’ ಕುರಿತು ಅವರು ದಿಕ್ಸೂಚಿ ಭಾಷಣ ಮಾಡಿದರು.

‘ವಿದ್ಯಾರ್ಥಿಯ ಕೌಶಲದ ಕೊರತೆಯಷ್ಟೇ ಅಲ್ಲದೇ ಅಧ್ಯಾಪಕರ ಕೌಶಲವೂ ಸಂಸ್ಥೆಗಳ ಅವಶ್ಯಕತೆಗೆ ತಕ್ಕಂತೆ ರೂಪುಗೊಂಡಿಲ್ಲ. ಸಂಶೋಧನೆಯ ಜೊತೆಜೊತೆಗೆ ಬೋಧನೆಯೂ ಮುಖ್ಯ. ಅವುಗಳ ಮಧ್ಯೆ ಸಮತೋಲನ ಅಗತ್ಯವೆಂದು ಕುಲಪತಿಗಳು ತಿಳಿಸಿದ್ದಾರೆ. ಸಂಸ್ಥೆಯ ಮಟ್ಟದಲ್ಲಿ ಯಾವ ಅಧ್ಯಾಪಕರು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು, ಯಾರು ಬೋಧನೆಯಲ್ಲಿ ತೊಡಗಿಕೊಳ್ಳಬೇಕು ಎಂಬುದನ್ನು ಗುರುತಿಸಬೇಕಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಅಗತ್ಯ ಹಣಕಾಸಿನ ಸಹಾಯವು ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಧನಸಹಾಯದ ಕೊರತೆಯು ಸಂಶೋಧನಾ ಚಟುವಟಿಕೆಗಳನ್ನು ಬಾಧಿಸುತ್ತಿದೆ. 2015ರಲ್ಲಿ ಭಾರತದ ಸಂಶೋಧನಾ ವೆಚ್ಚವು ಶೇ 0.62 ಇದ್ದರೆ ಚೀನಾದಲ್ಲಿ ಶೇ 2.06, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಶೇ 6ರಷ್ಟನ್ನು ಉನ್ನತ ಶಿಕ್ಷಣಕ್ಕಾಗಿ ವ್ಯಯಿಸುತ್ತಿದ್ದಾರೆ. 2019ರ ನೂತನ ಶಿಕ್ಷಣ ನೀತಿಯ ಕರಡು ಪ್ರತಿಯು ಶಿಕ್ಷಣ ಕ್ಷೇತ್ರದಲ್ಲಿ ಶೇ 6ರಷ್ಟು ಸಾರ್ವಜನಿಕ ಧನದ ಹೂಡಿಕೆಯ ಪ್ರಸ್ತಾವ ಮಾಡಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅವರು ವಿವಿಧ ನಿಕಾಯಗಳ ಡೀನರು ತಮ್ಮ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಕೋರಿಕೆ ಸಲ್ಲಿಸಿದ್ದನ್ನು ಅನುಮೋದಿಸಿದರು.

ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು. ಕುಲಸಚಿವ ಪ್ರೊ.ಸಿ.ಸೋಮಶೇಖರ್ ಅವರು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಹೆಸರನ್ನು ಕರೆದರು. ಮೌಲ್ಯಮಾಪನ ಕುಲಸಚಿವ ಪ್ರೊ.ಸಂಜೀವಕುಮಾರ ಎಂ., ಕಲಾ ನಿಕಾಯದ ಡೀನ್ ಪ್ರೊ.ಎಚ್‌.ಟಿ.ಪೋತೆ, ಕಾನೂನು ನಿಕಾಯದ ಡೀನ್ ಪ್ರೊ.ದೇವಿದಾಸ ಮಾಲೆ ಸೇರಿದಂತೆ ವಿವಿಧ ನಿಕಾಯಗಳ ಡೀನ್‌ಗಳು, ಸಿಂಡಿಕೇಟ್ ಸದಸ್ಯರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.