ಕಲಬುರಗಿ: ‘ಅಖಿಲ ಭಾರತ ಮಟ್ಟದಲ್ಲಿ ನಡೆಯುವ ವೈದ್ಯಕೀಯ ಕಾಲೇಜುಗಳ ಪ್ರವೇಶ ಪರೀಕ್ಷೆ ವ್ಯವಸ್ಥೆಯಿಂದ ಕರ್ನಾಟಕ ಹೊರಬರುವುದು ಸುಲಭವಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀಟ್ ಪರೀಕ್ಷೆ ನಡೆಸುವಲ್ಲಿ ಹಲವು ಲೋಪದೋಷಗಳಿವೆ. ಇದಕ್ಕಾಗಿ ತಮಿಳುನಾಡು ಸರ್ಕಾರ ಈ ವ್ಯವಸ್ಥೆಯಿಂದ ಹೊರಗುಳಿಯುವುದಾಗಿ ತಿಳಿಸಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಮುಂಚೆ ರಾಜ್ಯ ಸರ್ಕಾರಗಳೇ ಪ್ರವೇಶ ಪರೀಕ್ಷೆ ನಡೆಸುತ್ತಿದ್ದವು. ಆದರೆ, ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರವು ಅಖಿಲ ಭಾರತ ಮಟ್ಟದಲ್ಲಿ ಏಕಕಾಲಕ್ಕೆ ನೀಟ್ ಪರೀಕ್ಷೆ ನಡೆಸುತ್ತಿದೆ. ಈ ಪರೀಕ್ಷೆ ನಡೆಸಲು ಸಂಸತ್ತಿನಲ್ಲಿ ಕಾಯ್ದೆಯನ್ನೂ ರೂಪಿಸಲಾಗಿದೆ. ನೀಟ್ ಪರೀಕ್ಷೆಗೆ ಕಾಯ್ದೆಯ ಚೌಕಟ್ಟೂ ಇರುವುದರಿಂದ ರಾಜ್ಯಗಳು ಹೊರಗುಳಿಯುವಂತಿಲ್ಲ’ ಎಂದರು.
‘ನೀಟ್‌ನಿಂದ ರಾಜ್ಯಗಳು ಹೊರಗುಳಿಯಬೇಕಾದರೆ ಸಂಸತ್ತಿನಲ್ಲಿ ಕಾಯ್ದೆ ತಿದ್ದುಪಡಿಯಾಗಬೇಕು ಅಥವಾ ಸುಪ್ರೀಂಕೋರ್ಟ್ ಈ ವ್ಯವಸ್ಥೆ ರದ್ದತಿಗೆ ಆದೇಶ ಹೊರಡಿಸಬೇಕು. ಈ ಎರಡು ಆಯ್ಕೆ ಬಿಟ್ಟರೆ ಬೇರೆ ಸಾಧ್ಯತೆಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನೀಟ್ ಪರೀಕ್ಷೆಯಲ್ಲಿ ಮೊದಲು ಅಕ್ರಮವೇ ನಡೆದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಹೇಳಿಕೆ ನೀಡಿದರು. ನಂತರ ಅಕ್ರಮ ನಡೆದಿದೆ ಎಂದರು. ಪರೀಕ್ಷೆಗಳನ್ನು ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ನೀಟ್, ಪಿಜಿ–ಸಿಇಟಿ, ನೆಟ್ ಪರೀಕ್ಷೆಗಳನ್ನೂ ಏಕಾಏಕಿ ರದ್ದುಪಡಿಸಿತು. ಇಷ್ಟೆಲ್ಲ ಅವಾಂತರಗಳು ನಡೆದರೂ ಟೆಸ್ಟಿಂಗ್ ಏಜೆನ್ಸಿಯ ಮುಖ್ಯಸ್ಥರ ವಿರುದ್ಧ ಯಾವುದೇ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ನೀಟ್ ಪರೀಕ್ಷೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ನರೇಂದ್ರ ಮೋದಿ ಸರ್ಕಾರದ ಪ್ರಭಾವಿಗಳೇ ಇದರಲ್ಲಿ ಇರುವುದರಿಂದ ಕೇಂದ್ರ ಸರ್ಕಾರ ಸುಮ್ಮನೆ ಕುಳಿತಿದೆ. ಸಚಿವರ ಬದಲು ಸಂವಿಧಾನೇತರ ಶಕ್ತಿಗಳು, ಆರ್‌ಎಸ್‌ಎಸ್ ಮುಖಂಡರು ಹೇಳಿದಂತೆ ತೀರ್ಮಾನಗಳು ನಡೆಯುತ್ತಿವೆ ಎಂಬ ಮಾಹಿತಿಗಳಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.