ADVERTISEMENT

ವಾಡಿ: ರಸ್ತೆಗಳಿಗೆ ಕಂಟಕವಾದ ಜಲ ಜೀವನ್ ಮಿಷನ್

​ಪ್ರಜಾವಾಣಿ ವಾರ್ತೆ
Published 28 ಮೇ 2025, 14:16 IST
Last Updated 28 ಮೇ 2025, 14:16 IST
ವಾಡಿ ಸಮೀಪದ ಹಲಕರ್ಟಿಯ ಪ್ರಮುಖ ರಸ್ತೆಯನ್ನು ಜಲ ಜೀವನ್ ಮಿಷನ್‌ಗಾಗಿ ಅಗೆದಿದ್ದರಿಂದ ಹಾಳಾಗಿರುವುದು
ವಾಡಿ ಸಮೀಪದ ಹಲಕರ್ಟಿಯ ಪ್ರಮುಖ ರಸ್ತೆಯನ್ನು ಜಲ ಜೀವನ್ ಮಿಷನ್‌ಗಾಗಿ ಅಗೆದಿದ್ದರಿಂದ ಹಾಳಾಗಿರುವುದು   

ವಾಡಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲಜೀವನ್ ಮಿಷನ್‌ ಯೋಜನೆ ಗ್ರಾಮೀಣ ಭಾಗದ ರಸ್ತೆಗಳಿಗೆ ಕಂಟಕವಾಗಿದೆ.

ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಜಲ ಜೀವನ್ ಮಿಷನ್ ಯೋಜನೆ ಜಾರಿಗೊಳಿಸಲು ಗ್ರಾಮದ ಕಾಂಕ್ರೀಟ್ ರಸ್ತೆ ಅಗೆದು ತಿಂಗಳಾನುಗಟ್ಟಲೇ ಹಾಗೆಯೇ ಬಿಡಲಾಗಿದ್ದರೆ, ಮತ್ತೊಂದೆಡೆ ಅಗೆದ ರಸ್ತೆಯನ್ನು ಸರಿಯಾಗಿ ಕಾಂಕ್ರೀಟ್‌ನಿಂದ ಮುಚ್ಚದೇ ಅಸಡ್ಡೆ ತೋರಲಾಗಿದೆ. ಇದರಿಂದಾಗಿ ವೃದ್ಧರು, ಕುರಿ-ಮೇಕೆ, ದನ-ಕರು ಸಂಚಾರಕ್ಕೆ ತೊಂದರೆ ಆಗಿದೆ.

ಮಳೆನೀರು ಅಗೆದ ರಸ್ತೆಯ ಆಳಕ್ಕೆ ನುಗ್ಗುತ್ತಿದೆ. ಕೊಲ್ಲೂರು, ಹಲಕರ್ಟಿ, ಇಂಗಳಗಿ, ಲಾಡ್ಲಾಪುರ, ನಾಲವಾರ, ಸನ್ನತಿ, ಸಹಿತ ಹಲವೆಡೆ ರಸ್ತೆ ಮರುನಿರ್ಮಾಣ ನಿಯಮ ಪಾಲನೆಯಾಗಿಲ್ಲ. ಕ್ಷೀಪ್ರಗತಿಯಲ್ಲಿ ಕಾಮಗಾರಿ ಮುಗಿಸದ ಗುತ್ತಿಗೆದಾರರ ವಿರುದ್ಧ ಇಲಾಖೆ ಕ್ರಮ ಜರುಗಿಸದಿರುವುದು ಹಾಗೂ ರಸ್ತೆ ನಿರ್ಮಾಣಕ್ಕೆ ಸೂಚಿಸದಿರುವುದು ಸ್ಥಳೀಯರ ಅನುಮಾನಕ್ಕೆ ಕಾರಣವಾಗುತ್ತಿದೆ. ಯೋಜನೆ ಸಂಪೂರ್ಣ ಜಾರಿಯಾದ ಬಳಿಕ ರಸ್ತೆಗಳನ್ನು ಯಥಾವತ್ತಾಗಿ ಕಾಂಕ್ರೀಟ್‌ನಿಂದ ಮುಚ್ಚಲಾಗುತ್ತದೆ. ಅಲ್ಲಿಯವರೆಗೂ ಓಡಾಟಕ್ಕೆ ತೊಂದರೆಯಾಗದಿರಲು ತಾತ್ಕಾಲಿಕ ಮಣ್ಣಿನಿಂದ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಯೋಜನೆ ಮುಗಿಯುವುದು ಯಾವಾಗ? ಅಲ್ಲಿಯವರೆಗೆ ಓಡಾಡುವ ಜನರ ಗತಿ ಏನು ಎನ್ನುವುದೇ ಸಾರ್ವಜನಿಕರ ಪ್ರಶ್ನೆಯಾಗಿದೆ.

ADVERTISEMENT

‘ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ರಸ್ತೆಗಳನ್ನು ಅಗೆದು ಗುಂಡಿಗಳನ್ನು ಸರಿಯಾಗಿ ಮುಚ್ಚದೇ ಹಾಗೆ ಬಿಟ್ಟು ಸಂಪೂರ್ಣ ರಸ್ತೆಗಳನ್ನು ಹಾಳು ಮಾಡಲಾಗಿದೆ’ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಕೆಲ ಕಡೆ ಆರು ತಿಂಗಳಾದರೂ ಗುಂಡಿಗಳನ್ನು ಮುಚ್ಚಿಲ್ಲ. ಇನ್ನೂ ಕೆಲವೆಡೆ ಗ್ರಾಮದ ಉದ್ದಗಲಕ್ಕೂ ಇರುವ ರಸ್ತೆಗಳ ಮಧ್ಯಭಾಗ ಅಗೆದು ಎರಡು ಭಾಗಗಳನ್ನಾಗಿ ಮಾಡಿ ಕೇವಲ ಮಣ್ಣು ಹಾಕಿ ಮುಚ್ಚಲಾಗಿದೆ. ಕಾಂಕ್ರೀಟ್ ಹಾಕಿ ಮುಚ್ಚಿ ನೋಡಲು ಮೊದಲಿನ ತರಹ ರಸ್ತೆ ಕಾಣಬೇಕು ಎನ್ನುವ ನಿಯಮ ಹಲವೆಡೆ ಪಾಲನೆಯಾಗಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.