ADVERTISEMENT

ಕಲಬುರಗಿ: ಉರುಳು ಸೇವೆ ಮಾಡಿ ಜೆಡಿಎಸ್‌ ಪ್ರತಿಭಟನೆ

ಬೆಳೆ ಪರಿಹಾರ, ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2023, 16:18 IST
Last Updated 6 ನವೆಂಬರ್ 2023, 16:18 IST
ಕಲಬುರಗಿಯಲ್ಲಿ ಸೋಮವಾರ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜೆಡಿಎಸ್ ಕಾರ್ಯಕರ್ತರು ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಸೋಮವಾರ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜೆಡಿಎಸ್ ಕಾರ್ಯಕರ್ತರು ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ತೋಟದ ಮನೆಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು, ರೈತರಿಗೆ ಬೆಳೆ ಪರಿಹಾರ, ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಕರ್ತರು ಉರುಳು ಸೇವೆ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅವರಲ್ಲಿ ಕೆಲವರು ಅಂಗಿ ಬಿಚ್ಚಿ ಜಿಲ್ಲಾಧಿಕಾರಿ ಕಚೇರಿವರೆಗೂ ಉರುಳು ಸೇವೆ ಮಾಡಿ ಪ್ರತಿಭಟನೆ ಮಾಡಿದರು.

ತೋಟದ ಮನೆಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಮನವಿ ಮಾಡುತ್ತಿದ್ದರು ಸ್ಪಂದನೆ ಸಿಗುತ್ತಿಲ್ಲ. ಸಮೀಕ್ಷೆ ನಡೆಸಿದ ನಂತರ  ವಿದ್ಯುತ್ ಕೊಡುವುದಾಗಿ ಹೇಳಿ ವಂಚಿಸಲಾಗಿದೆ. ಪದೇ ಪದೇ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರೂ ಬೇಡಿಕೆ ಈಡೇರಿಸುತ್ತಿಲ್ಲ. ತೋಟದ ಮನೆಯಲ್ಲಿ ವಾಸಿಸುವ ರೈತರ ಮಕ್ಕಳಿಗೆ ನಿತ್ಯ ಅಭ್ಯಾಸ ಮಾಡಲು ತೊಂದರೆ ಆಗುತ್ತಿದೆ. ರಾತ್ರಿ ವೇಳೆ ಹಾವು ಕಚ್ಚಿ ಹಲವು ರೈತರು ಮೃತಪಟ್ಟಿದ್ದಾರೆ ಎಂದು ‍ಪ್ರತಿಭಟನ ನಿರತರು ಆರೋಪಿಸಿದರು.

ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರದಿಂದ ರೈತರ ಹಿತ ಕಾಪಾಡಲು ಆಗುತ್ತಿಲ್ಲ. ಭೀಮಾ ನದಿಯಲ್ಲಿ ನೀರಿಲ್ಲದೆ ನದಿ ತೀರ ಒಣಗಿ ಹೋಗಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬೇಸಿಗೆ ಅವಧಿಗೆ 5 ಟಿಎಂಸಿ ನೀರು ನದಿಗೆ ಹರಿಸಬೇಕು. ಕಬ್ಬು ದರ ನಿಗದಿಯಲ್ಲಿ ತಾರತಮ್ಯ ಮಾಡಲಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಪ್ರತಿ ಟನ್‌ಗೆ ₹3,000ದಿಂದ ₹3,200 ನಿಗದಿ ಮಾಡಲಾಗಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ₹2,600ರಿಂದ ₹2,650ರಷ್ಟು ಬೆಲೆ ನಿಗದಿಪಡಿಸಿವೆ ಎಂದು ಹೇಳಿದರು.

ADVERTISEMENT

ತಾರತಮ್ಯದ ದರ ನಿಗದಿಯು ರೈತರಿಗೆ ಎಸಗಿದ ದ್ರೋಹ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಬೆಲೆಯನ್ನು ಮರುಪರಿಶೀಲನೆ ಮಾಡಬೇಕು. ರಸ್ತೆಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಅ.ಬಡದಾಳ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಎಸ್.ಹೂಗಾರ್, ಮುಖಂಡರಾದ ಲಕ್ಷ್ಮಿಪುತ್ರ, ಬಸವರಾಜ ಹೇರೂರು, ಸಿದ್ದು ಪೂಜಾರಿ, ಶರಣ ಗೌಡ ಮಾಲಿ ಪಾಟೀಲ, ಭಾಗಣ್ಣ ಕುಂಬಾರ, ನಿಂಗಣ್ಣ, ರೇವಣಸಿದ್ದ, ಕಂಠಪ್ಪ ಹದನೂರ, ಕಾಶಿನಾಥ ಕಲಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.