ADVERTISEMENT

ಗುತ್ತಿಗೆದಾರನ ವಿರುದ್ದ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:42 IST
Last Updated 26 ಅಕ್ಟೋಬರ್ 2025, 7:42 IST
ಜೇವರ್ಗಿ ತಾಲ್ಲೂಕಿನ ನರಿಬೋಳ-ಚಾಮನೂರ ನಡುವೆ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಭಿಯಂತರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಜೇವರ್ಗಿ ತಾಲ್ಲೂಕಿನ ನರಿಬೋಳ-ಚಾಮನೂರ ನಡುವೆ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಭಿಯಂತರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಜೇವರ್ಗಿ: ‘ನರಿಬೋಳ- ಚಾಮನೂರ ಸೇತುವೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಅರೆಬರೆ ಕೆಲಸ ಮಾಡಿ ಕಾಮಗಾರಿ ಬಿಲ್ ಪಡೆದ ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಅವರು ಕಲಬುರಗಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಒತ್ತಾಯಿಸಿದರು.

ಸೇತುವೆ ಕಾಮಗಾರಿ ವಿರುದ್ಧ ದೂರು ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿ ಮಾತನಾಡಿದ ನರಿಬೋಳ, ‘ಕಳೆದ 7 ವರ್ಷಗಳಿಂದ ಈ ಸೇತುವೆ ಕಾಮಗಾರಿ ಸ್ಥಗಿತಗೊಂಡಿದೆ. ಈಚೆಗೆ ಪ್ರವಾಹ ಸಂಧರ್ಭದಲ್ಲಿ ನರಿಬೋಳ- ಚಾಮನೂರು ಗ್ರಾಮದ ಹತ್ತಿರ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿಂದ ನೀರು ಹರಿದಿದೆ. ನೀರಿನ ರಭಸಕ್ಕೆ ಸೇತುವೆಯ ಸ್ಲ್ಯಾಬ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಕಳಪೆಯಿಂದ ಕೂಡಿರುವ ಈ ಕಾಮಗಾರಿ ಗುತ್ತಿಗೆ ರದ್ದುಪಡಿಸಿ ಗುತ್ತಿಗೆದಾರನ ವಿರುದ್ದ ಸೂಕ್ತ ಕ್ರಮ‌ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ರಸ್ತೆಗಾಗಿ ಜಮೀನು ನೀಡಿರುವ ರೈತರಿಗೆ ಶೀಘ್ರ ಹಣ ಬಿಡುಗಡೆ ಮಾಡಬೇಕು. 15 ದಿನದ ಒಳಗಾಗಿ ಹಣ ಪಾವತಿ ಮಾಡದಿದ್ದರೆ ಸೇತುವೆ ಮೇಲೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯ’ ಎಂದು ಎಚ್ಚರಿಸಿದರು.

ADVERTISEMENT

‘ಗುತ್ತಿಗೆದಾರನ ಅಗ್ರಿಮೆಂಟ್ ರದ್ದುಪಡಿಸಿ, ಸುಮಾರು ₹6 ಕೋಟಿ ದಂಡ ಹಾಕಿ ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದು, ಈ ಕಾಮಗಾರಿ ಪ್ರಾರಂಭದ ಕುರಿತು 15 ದಿನದಲ್ಲಿ ತಿಳಿಸಲಾಗುವುದು’ ಎಂದು ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದರು.

ಗ್ರಾಮಿಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರವಣ ಕುಮಾರ ನಾಯಕ, ರೈತರು, ಅಧಿಕಾರಿಗಳು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.