ADVERTISEMENT

ಜೇವರ್ಗಿ | ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಭೀಮಾನದಿ

ದಿನವಿಡೀ ಸುರಿದ ಮಳೆ : ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 6:22 IST
Last Updated 27 ಸೆಪ್ಟೆಂಬರ್ 2025, 6:22 IST
ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿ
ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಹತ್ತಿರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿ   

ಜೇವರ್ಗಿ: ಕಳೆದ ನಾಲ್ಕೈದು ದಿನಗಳಿಂದ ಭೀಮಾನದಿಯ ಪ್ರವಾಹ ಮುಂದುವರಿದಿದೆ. ಶುಕ್ರವಾರ ಈ ಪ್ರವಾಹ ಪರಿಸ್ಥಿತಿ ಇನ್ನಷ್ಟು ಹೆಚ್ಚಿದೆ. ಹೀಗಾಗಿ ನದಿ ಅಂಚಿನಲ್ಲಿರುವ ಮನೆಗಳಿಗೆ ನೀರು ನುಗ್ಗಿ, ಜನರನ್ನು ನಿರಾಶ್ರಿತರಾಗಿದ್ದಾರೆ.

ತಾಲ್ಲೂಕಿನ ಕೋಳಕೂರ, ಕಟ್ಟಿಸಂಗಾವಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ನೀರು ತುಂಬಿದ್ದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೋಬಾಳ, ರದ್ದೇವಾಡಗಿ, ಕೋನಾಹಿಪ್ಪರಗಾ, ಕೂಡಿ, ನಾರಾಯಣಪುರ, ಇಟಗಾ, ಹರವಾಳ, ರಾಸಣಗಿ ಸೇರಿದಂತೆ ಹತ್ತಾರು ನದಿ ತೀರದ ಗ್ರಾಮಗಳಲ್ಲಿ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ.

ಇಟಗಾ ಗ್ರಾಮದ ಯಲ್ಲಮ್ಮ ದೇವಸ್ಥಾನ ಜಲಾವೃತಗೊಂಡಿದ್ದು, ಕಟ್ಟಿಸಂಗಾವಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ-50 ರ ಮೇಲಿನ ಸೇತುವೆಗೆ ನೀರು ತಾಗಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹಳೆಯ ಸೇತುವೆ ಮೇಲೆ ವಾಹನ, ಜನರ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹಳೆಯ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ‌ಬಿರುಕು ಬಿಟ್ಟಿದೆ. ಜೇವರ್ಗಿ ಪಟ್ಟಣದ ಮಿನಿ ವಿಧಾನ ಸೌಧ ಕಟ್ಟಡ ಸುತ್ತುವರೆದ ನೀರಿನಿಂದ ಕಚೇರಿಗೆ ಬರುವ ಜನರು, ವಾಹನ ಸವಾರರು ಪ್ರಯಾಸಪಡುವಂತಾಯಿತು.

ಕೋಬಾಳ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾರಾಯಣಪುರ ಗ್ರಾಮದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ನೀರು ನುಗ್ಗಿ ಹತ್ತಿ ಹಾಗೂ‌ ತೊಗರಿ ಬೆಳೆ ಕೊಚ್ಚಿಕೊಂಡು ಹೋಗಿದೆ. ಜೇವರ್ಗಿ ತಹಶೀಲ್ದಾ‌ರ್ ಮಲ್ಲಣ್ಣ ಯಲಗೋಡ ಪ್ರವಾಪಿಡಿತ ಸ್ಥಳಗಳಿಗೆ ಭೇಟಿ ನೀಡಿದರು.

ಜಲಾವೃತಗೊಂಡ ಮಿನಿ ವಿಧಾನಸೌಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.