ಜೇವರ್ಗಿ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಹತ್ತಿರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿs
ಜೇವರ್ಗಿ: ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ 8 ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳನ್ನು ಸ್ಥಳಾಂತರಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಸಿಗದೇ ಪರದಾಡುವಂತಾಗಿದೆ.
ಜೇವರ್ಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ನರಿಬೋಳ, ಕೋಳಕೂರ, ಆಂದೋಲಾ ಹಾಗೂ ಯಡ್ರಾಮಿ ತಾಲ್ಲೂಕಿನ ವಡಗೇರಾ, ಮಳ್ಳಿ, ಇಜೇರಿ, ಆಲೂರ, ಬೀಳವಾರ ವಸತಿ ನಿಲಯಗಳನ್ನು ಸ್ಥಳಾಂತರ ಮಾಡಲಾಗಿದೆ. ವಿದ್ಯಾರ್ಥಿಗಳ, ಪಾಲಕರು, ಗ್ರಾಮಸ್ಥರ ಗಮನಕ್ಕೆ ತಾರದೇ ಏಕಾಏಕಿ ಸ್ಥಳಾಂತರಗೊಳಿಸಿ ಅವುಗಳನ್ನು ಉನ್ನತೀಕರಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಕೋಳಕೂರ, ನರಿಬೋಳ, ಆಂದೋಲಾ, ಇಜೇರಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳನ್ನು ಸ್ಥಳಾಂತರ ಮಾಡಿ ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನಾಗಿ ಉನ್ನತೀಕರಿಸಲಾಗಿದೆ. ಅದರಂತೆ, ಬೀಳವಾರ, ಆಲೂರ, ವಡಗೇರಾ ಮೆಟ್ರಿಕ್ ಪೂರ್ವ ವಸತಿ ನಿಲಯಗಳನ್ನು ಸೇರಿಸಿ ಯಡ್ರಾಮಿ ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನಾಗಿ ಉನ್ನತೀಕರಿಸಲಾಗಿದೆ.
ಗ್ರಾಮೀಣ ಮಟ್ಟದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿತರಾಗುವವ ಸಾಧ್ಯತೆ ಹೆಚ್ಚಾಗಿದೆ. ಅವಳಿ ತಾಲ್ಲೂಕಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಆರ್ಥಿಕವಾಗಿ ಕಡುಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಸದರಿ ವಸತಿ ನಿಲಯಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಈಗಾಗಲೇ 5ನೇ ತರಗತಿಯಿಂದ 10ನೇ ತರಗತಿವರೆಗೆ ವಸತಿ ನಿಲಯದಲ್ಲಿ ಇದ್ದು, ಏಕಾಏಕಿ ವಸತಿ ನಿಲಯಗಳನ್ನು ಉನ್ನತೀಕರಿಸುವ ಸರ್ಕಾರದ ನಿಲುವಿನಿಂದ ಸಮಸ್ಯೆ ಎದುರಾಗಿದೆ.
ಶಾಲೆಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ವಸತಿ ನಿಲಯದಿಂದ ವಂಚಿತರಾಗಿ ಶಿಕ್ಷಣದಿಂದ ದೂರ ಉಳಿಯುವ ಆತಂಕ ಪಾಲಕರಿಗೆ ಎದುರಾಗಿದೆ. ವಿದ್ಯಾರ್ಥಿಗಳ ಅಭ್ಯಾಸದ ಹಿತದೃಷ್ಟಿಯಿಂದ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆದು ಯಥಾವತ್ತಾಗಿ ಇದ್ದ ಸ್ಥಳದಲ್ಲಿಯೇ ವಸತಿ ನಿಲಯಗಳನ್ನು ಮುಂದುವರಿಸುವಂತೆ ಪಾಲಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.