ADVERTISEMENT

ಜೇವರ್ಗಿ | ಮಳೆಗೆ ಪಪ್ಪಾಯ, ಕಲ್ಲಂಗಡಿ ಬೆಳೆ ನಾಶ: ಲಕ್ಷಾಂತರ ರೂಪಾಯಿ ನಷ್ಟ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:35 IST
Last Updated 7 ಅಕ್ಟೋಬರ್ 2025, 5:35 IST
ಜೇವರ್ಗಿ ಪಟ್ಟಣದ ಹೊರವಲಯದ ವಿಷ್ಣು ಮಹೇಂದ್ರಕರ್ ಹೊಲದಲ್ಲಿ ಮಳೆಗೆ ಪಪ್ಪಾಯ ಗಿಡಗಳು ನೆಲಕ್ಕುರುಳಿ ಬಿದ್ದು ಹಾಳಾಗಿರುವುದು
ಜೇವರ್ಗಿ ಪಟ್ಟಣದ ಹೊರವಲಯದ ವಿಷ್ಣು ಮಹೇಂದ್ರಕರ್ ಹೊಲದಲ್ಲಿ ಮಳೆಗೆ ಪಪ್ಪಾಯ ಗಿಡಗಳು ನೆಲಕ್ಕುರುಳಿ ಬಿದ್ದು ಹಾಳಾಗಿರುವುದು   

ಜೇವರ್ಗಿ: ಭಾನುವಾರ ಹಾಗೂ ಸೋಮವಾರ ರಾತ್ರಿಯಿಡಿ ಸುರಿದ ಗಾಳಿ ಸಹಿತ ಮಳೆಯಿಂದ ಪಟ್ಟಣದ ಕಲಬುರಗಿ ರಸ್ತೆಯ ಕೃಷಿ ವಿಜ್ಞಾನ ಕೇಂದ್ರದ ಹತ್ತಿರ ಬೆಳೆದು ನಿಂತಿದ್ದ ಕಲ್ಲಂಗಡಿ, ಪಪ್ಪಾಯಿ ಮರಗಳು ಮುರಿದು ಬಿದ್ದಿದ್ದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಗಾಳಿ, ಮಳೆಗೆ ಸಾಲಾ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಬೆಳೆದಿದ್ದ ಬಂಗಾರದಂತಹ ಬೆಳೆ ನೆಲಸಮವಾಗಿವೆ. ಪಟ್ಟಣದ ಶಾಸ್ತ್ರೀಚೌಕ್ ಬಡಾವಣೆಯ ವಿಷ್ಣು ಮಹೇಂದ್ರಕರ್ ಎಂಬ ರೈತ ತನ್ನ 3 ಎಕರೆ ಜಮೀನನಲ್ಲಿ ಸುಮಾರು ₹4 ಲಕ್ಷ ಖರ್ಚು ಮಾಡಿ 3000 ಪಪ್ಪಾಯ ಗಿಡಗಳನ್ನು ನೆಟ್ಟಿದ್ದರು. ಕಷ್ಟಪಟ್ಟು ವ್ಯವಸಾಯ ಮಾಡಿದ್ದರಿಂದ ಉತ್ತಮ ಫಸಲು ಕೂಡ ಬಂದಿತ್ತು. ಆದರೆ ಮಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ್ದು, ರೈತ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಗೆ 3000 ಪಪ್ಪಾಯಿ ಗಿಡಗಳಲ್ಲಿ ಸುಮಾರು 1500 ವರೆಗೂ ಗಿಡಗಳು ನೆಲಸಮವಾಗಿವೆ. ಒಂದು ಗಿಡಕ್ಕೆ ಅಂದಾಜು 60-70 ಕೆಜಿ ಹಣ್ಣು ಬರುತ್ತಿತ್ತು. ಆದರೀಗ ಭಾರೀ ಗಾಳಿ ಮಳೆಯಿಂದಾಗಿ ನೂರಾರು ಟನ್‌ಗಳಷ್ಟು ಪಪ್ಪಾಯಿ ಹಣ್ಣು ನಷ್ಟವಾಗಿದೆ.

ADVERTISEMENT

ಅಲ್ಲದೇ 2 ಎಕರೆಯಲ್ಲಿ ಮಲ್ಚಿಂಗ್, ಪೈಪ್ ಲೈನ್ ಮಾಡಿ ಬಿತ್ತಿದ್ದ ಕಲ್ಲಂಗಡಿ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಜ, ಗೊಬ್ಬರ, ಸ್ಪ್ರಿಂಕ್ಲರ್ ಮಾಡಿ ಕಲ್ಲಂಗಡಿ ಬಿತ್ತನೆ ಮಾಡಲಾಗಿತ್ತು. 15 -20 ದಿನಗಳಲ್ಲಿ ಕಟಾವಿಗೆ ಬರುತ್ತಿದ್ದ ಕಲ್ಲಂಗಡಿ ಕೊಚ್ಚಿಕೊಂಡು ಹೋಗಿವೆ. ಬೆಳೆಹಾನಿಯಿಂದ ತೀವ್ರ ಸಂಕಷ್ಟಕ್ಕೆ ಈಡಾದ ಜಮೀನು ಮಾಲೀಕ ವಿಷ್ಣು, ನಾಶವಾದ ಪಪ್ಪಾಯ, ಕಲ್ಲಂಗಡಿ ಗಿಡಗಳ ನೋಡಿ ಮರುಕಪಡುತ್ತಿದ್ದು, ಪರಿಹಾರಕ್ಕಾಗಿ ಮೊರೆ ಇಟ್ಟಿದ್ದಾರೆ.

ಹಾಳಾದ ಪಪ್ಪಾಯ ಗಿಡಗಳು.
ಜನಪ್ರತಿನಿಧಿಗಳು ಅಧಿಕಾರಿಗಳು ಕಾಟಾಚಾರಕ್ಕೆ ರಸ್ತೆ ಬದಿಯ ಹೊಲಗಳ ಸಮೀಕ್ಷೆ ಮಾಡಿ ಹೋಗುತ್ತಿದ್ದಾರೆ. ನಿಜವಾಗಿ ಮಳೆಯಿಂದ ಹಾಳಾಗಿರುವ ನಮ್ಮಂತ ರೈತರ ಜಮೀನಿಗೆ ಭೇಟಿ ಕೊಟ್ಟು ಕಷ್ಟ ಕೇಳಲು ಯಾರೂ ಬರುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ನಮಗೆ ಪರಿಹಾರ ನೀಡಬೇಕು
ವಿಷ್ಣು ಮಹೇಂದ್ರಕರ್ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.