
ಆಳಂದ: ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದ ಆವರಣದಲ್ಲಿನ ಹೂಗಿಡಗಳ ಸಸ್ಯರಾಶಿ, ವಿಶಾಲ ರಸ್ತೆ, ಅಲಂಕಾರಿಕ ಕೆತ್ತನೆಯಿಂದ ಮಠವು ಪ್ರೇಕ್ಷಣೀಯ ತಾಣವಾಗಿ ಭಕ್ತರ ಕಣ್ಮನ ಸೆಳೆಯುತ್ತಿದೆ. ವಿಶೇಷವಾಗಿ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರ 41ನೇ ಗುರುವಂದನೆ ಮಹೋತ್ಸವಕ್ಕಾಗಿ ಮಠದಲ್ಲಿ ಕೈಗೊಂಡ ವಿದ್ಯುತ್ ದೀಪಾಲಂಕಾರವು ಝಗಮಗಿಸುತ್ತಿದೆ.
ಕಳೆದ ಮೂರು ವರ್ಷದಿಂದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ವಿಶೇಷ ಕಾಳಜಿಯಿಂದ ಮಠದಲ್ಲಿ ಉದ್ಯಾನ, ಹೂದೋಟ, ಸಾವಿರಾರೂ ಗಿಡಮರಗಳಿಂದ ಈ ಭಾಗದಲ್ಲಿ ವೃಕ್ಷೋದ್ಯಾನವಾಗಿ ಬಂದ ಭಕ್ತರ ಮನಸ್ಸಿಗೆ ಮುದ ನೀಡುತ್ತಿದೆ. ರೈತನ ಎತ್ತಿನ ಬಂಡಿ, ಜೋಡೆತ್ತು, ಆಕಳು ಮೊಲೆ ಹಾಲು ಕುಡಿಯಲು ಸಿದ್ಧಗೊಂಡ ಕರು ಹಾಗೂ ಮರದ ಕೆಳಗೆ ಕುಳಿತ ವೃದ್ಧ ದಂಪತಿಗಳ ಕೆತ್ತನೆಗಳು ಹಾಗೂ ಮುಖ್ಯದ್ವಾರದಲ್ಲಿನ ಆನೆ, ನವಿಲು, ಜಿಂಕೆ, ಬಹುಪರಾಕ್‌ಗೆ ಸಿದ್ಧಗೊಂಡ ಸೈನಿಕರ ಪ್ರತಿಕೃತಿಗಳ ಕೆತ್ತನೆಗಳು ಆಕರ್ಷಣೆಯ ಕೇಂದ್ರವಾಗಿವೆ.
ಗುಡ್ಡದಿಂದ ಸುತ್ತವರಿದ ಮಠಕ್ಕೆ ಈಗ ಹೊಸ ರೂಪ ನೀಡಲಾಗುತ್ತಿದೆ. ಭಕ್ತಭವನ, ದಾಸೋಹ ಮನೆ, ಅರಿವಿನ ಮನೆ, ಗುರುನಿಲಯಗಳು ಈಗ ಹಚ್ಚಹಸಿರಿನಿಂದ ಕಂಗೋಳಿಸುತ್ತಿವೆ. ಮಠದ ಮೇಲ್ಭಾಗದಲ್ಲಿ ನೂರು ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭ ನಿಲ್ಲಿಸಲಾಗಿದೆ.
ವಿಶಾಲವಾದ ಮುಖ್ಯರಸ್ತೆ ಸುತ್ತ ಬೀದಿದೀಪ, ಹೂಗಳು ತುಂಬಿದ ಫಲಪುಷ್ಪದ ಗಿಡಗಳು, ಸ್ವಾಗತ ಕಮಾನುಗಳು ವೈವಿಧ್ಯತೆ ಹೆಚ್ಚಿಸಿವೆ. ಬೆಂಗಳೂರು, ಮೈಸೂರು, ಪುಣೆ, ಜೈಪುರ ಸೇರಿದಂತೆ ದೇಶದ ವಿವಿಧ ಉದ್ಯಾನವನದಲ್ಲಿನ ಅಲಂಕಾರಿಕ ಹೂ, ಗಿಡಮರಗಳು ಶ್ರೀಮಠದಲ್ಲಿ ಬೆಳೆಸಲಾಗುತ್ತಿದೆ ಎಂದು ಬಸವರಾಜ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಡಗಾ ಮಠದ ಕೆಳಭಾಗದಲ್ಲಿನ ಹಳ್ಳದಲ್ಲಿ ಕೆರೆ ನಿರ್ಮಾಣದ ಯೋಜನೆಯು ರೂಪಗೊಳ್ಳುತ್ತಿದೆ, ಈಗಾಗಲೇ ಗ್ರಾ.ಪಂ ಯೋಜನೆಯ ನರೇಗಾದಡಿ ಕೆರೆ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಮಠದ ಮುಖ್ಯಭಾಗದಲ್ಲಿನ ರಥಬೀದಿಗೆ ಹೊಸ ಸ್ವರೂಪ ನೀಡಿದಲ್ಲದೇ ಎದುರಿನ ಸಿದ್ದಶ್ರೀ ಶಾಲೆಯ ಕಟ್ಟಡ, ಭಕ್ತರ ವಸತಿಮನೆಗಳು ಹಾಗೂ ಲಿಂ.ಶಿವಯೋಗಿ ಸಿದ್ದರಾಮ ಸ್ವಾಮೀಜಿಗಳ ಕರ್ತ್ಯು ಗದ್ದುಗೆ ಮಂದಿರ, ಮಠದ ಕಚೇರಿ ಕಟ್ಟಡ ಹಾಗೂ ಸಿದ್ದರಾಮೇಶ್ವರರ ನೆನಪಿನ ವಸ್ತುಸಂಗ್ರಹಾಲಯವು ಜಿಡಗಾ ಮಠಕ್ಕೆ ಆಗಮಿಸುವ ಭಕ್ತರಿಗೆ ಆಕರ್ಷಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.