ADVERTISEMENT

ಎಲ್ಲ ಜಿಲ್ಲಾಸ್ಪತ್ರೆಗಳಲ್ಲೂ ಜನೌಷಧಿ ಮಳಿಗೆ: ಸಚಿವ ಶ್ರೀರಾಮುಲು

ಅರಳಗುಂಡಗಿ ಧಾರ್ಮಿಕ ಸಭೆಯಲ್ಲಿ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 13:46 IST
Last Updated 30 ಆಗಸ್ಟ್ 2019, 13:46 IST
ಯಡ್ರಾಮಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಲತಪಸ್ವಿ ವರಹಳ್ಳಿರಾಯ ಶಿವಯೋಗಿಗಳ ಅನುಷ್ಠಾನ ಮಂಗಲ ಹಾಗೂ ಧಾರ್ಮಿಕ ಸಭೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಉದ್ಘಾಟಿಸಿದರು.
ಯಡ್ರಾಮಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಲತಪಸ್ವಿ ವರಹಳ್ಳಿರಾಯ ಶಿವಯೋಗಿಗಳ ಅನುಷ್ಠಾನ ಮಂಗಲ ಹಾಗೂ ಧಾರ್ಮಿಕ ಸಭೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಉದ್ಘಾಟಿಸಿದರು.   

ಜೇವರ್ಗಿ: ‘ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳನ್ನು ತೆರೆಯಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಯಡ್ರಾಮಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಸಿಂದಗಿ ತಾಲ್ಲೂಕಿನ ಗೊರವಗುಂಡಗಿಯ ಬಾಲ ತಪಸ್ವಿ ವರಹಳ್ಳಿರಾಯ ಶಿವಯೋಗಿಗಳ ಅನುಷ್ಠಾನ ಮಂಗಲ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.‌

‘ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸುವಂತೆಯೂ ಹಾಲಿ ಇರುವ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದರು.

ADVERTISEMENT

‘ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವನಾಗಿದ್ದಾಗ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 108 ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದ್ದೇನೆ. ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಅಗತ್ಯ ಅನುದಾನ ಬಿಡುಗಡೆಗೊಳಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು’ ಎಂದು ಸಚಿವರು ತಿಳಿಸಿದರು.

‘ಬಾಲತಪಸ್ವಿ ವರಹಳ್ಳಿರಾಯ ಶಿವಯೋಗಿಗಳು ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಗಾಗಿ ಶ್ರಾವಣ ಮಾಸದಲ್ಲಿ ಅನುಷ್ಠಾನ ಕೈಗೊಂಡಿದ್ದಾರೆ. ನಾಡಿನ ಮಠಾಧೀಶರು ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಸಮಾಜದಲ್ಲಿನ ಪ್ರತಿಯೊಬ್ಬರೂ ಮಠ, ಮಂದಿರಗಳಲ್ಲಿ ಆಯೋಜಿಸುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬೇಕು ಎಂದು ಶ್ರೀರಾಮುಲು ಹೇಳಿದರು.

ಸಾನ್ನಿಧ್ಯ ವಹಿಸಿದ್ದಅರಳಗುಂಡಗಿ ಶರಣಬಸವೇಶ್ವರ ಸಂಸ್ಥಾನ ಮಠದ ಬಲವಂತ ಶರಣರು ಮಾತನಾಡಿ, ‘ಹೋತಪೇಟದ ಶಿವಲಿಂಗ ಸ್ವಾಮೀಜಿ, ಕೊಡೆಕಲ್‌ ಶಿವಕುಮಾರ ಸ್ವಾಮೀಜಿ, ಶಹಾಪುರದ ಗುರುಪಾದೇಶ್ವರ ಸ್ವಾಮೀಜಿ, ಹುಬ್ಬಳ್ಳಿಯ ರಾಜಶೇಖರ ಶಿವಾಚಾರ್ಯರು ಸೇರಿದಂತೆ ನಾಡಿನ ಮಠಾಧೀಶರು ವೇದಿಕೆ ಮೇಲಿದ್ದರು.

ಸಂಸದ ಡಾ.ಉಮೇಶ ಜಾಧವ, ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುವರ್ಣ ಹಣಮಂತರಾವ ಮಾಲಾಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರೇವಣಸಿದ್ಧಪ್ಪ ಸಂಕಾಲಿ, ಶಿವರಾಜ ಪಾಟೀಲ ರದ್ದೇವಾಡಗಿ, ದಂಡಪ್ಪ ಸಾಹು ಕುಳಗೇರಿ, ಮುಖಂಡರಾದ ರಮೇಶಬಾಬು ವಕೀಲ, ಹಳ್ಳೆಪ್ಪಾಚಾರ್ಯ ಜೋಶಿ, ಬಸವರಾಜ ಮಾಲಿಪಾಟೀಲ, ಧರ್ಮಣ್ಣ ದೊಡಮನಿ, ಸಾಯಬಣ್ಣ ದೊಡಮನಿ, ಶೋಭಾ ಬಾಣಿ, ದೇವಿಂದ್ರಪ್ಪಗೌಡ ಮಾಗಣಗೇರಿ, ರೇವಣಸಿದ್ದಪ್ಪಗೌಡ ಕಮಾನಮನಿ, ಸಿದ್ದು ಹಿರೇಗೌಡ, ಗೊಲ್ಲಾಳಪ್ಪ ಕಡಿ, ಚನ್ನಪ್ಪ ರೇವೂರ, ಮಲ್ಲಿನಾಥ ವಿಶ್ವಕರ್ಮ, ಮಡಿವಾಳಪ್ಪಗೌಡ ಮಾಲಿಪಾಟೀಲ, ಯಲ್ಲಾಲಿಂಗ ಕಾಡನೂರ, ಚಿನ್ನಪ್ಪಗೌಡ ಪೊಲೀಸ್ ಪಾಟೀಲ ಸೇರಿದಂತೆ ತಾಲ್ಲೂಕಿನ ಬಿಜೆಪಿ ಮುಖಂಡರು ಅರಳಗುಂಡಗಿ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.