ADVERTISEMENT

ಗುವಿವಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 7:07 IST
Last Updated 1 ಆಗಸ್ಟ್ 2025, 7:07 IST
ಪ್ರಶ್ನೆ ಪತ್ರಿಕೆ ಸೋರಿಕೆ
ಪ್ರಶ್ನೆ ಪತ್ರಿಕೆ ಸೋರಿಕೆ   

ಸಾಂದರ್ಭಿಕ ಚಿತ್ರ 

ಕಲಬುರಗಿ: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಡಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಬ್ಬಂದಿ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.

‘ಜುಲೈ 29ರಂದು ಮಧ್ಯಾಹ್ನ 12.30ಕ್ಕೆ ನಡೆದಿದ್ದ ಪದವಿ (ಬಿಎ, ಬಿ.ಕಾಂ, ಬಿಬಿಎಂ) ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಜನತಾ ಪರಿವಾರ ಸಂಘಟನೆಯ ಅಧ್ಯಕ್ಷ ಮೊಹಮ್ಮದ್ ಸಿರಾಜುದ್ದೀನ್‌ ಶಾಬ್ದಿ ಪೊಲೀಸರಿಗೆ ದೂರು ನೀಡಿದ್ದರು. ಆ ದೂರಿನನ್ವಯ ಗುಲಬರ್ಗಾ ವಿವಿಯ ಅಪರಿಚಿತ ಸಿಬ್ಬಂದಿ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಎನ್‌.ಜಿ.ಕಣ್ಣೂರ, ‘ಅಂದು ಮಧ್ಯಾಹ್ನ 2ರಿಂದ 4 ಗಂಟೆ ತನಕ ಪರೀಕ್ಷೆ ನಡೆದಿದೆ. ಅಂದು ಸಂಜೆ 7 ಗಂಟೆಗೆ ಹೊತ್ತಿಗೆ ದೂರು ದಾಖಲಾದ ಮಾಹಿತಿ ದೊರೆತಿದೆ. ಈ ಸಂಬಂಧ ಪರಿಶೀಲಿಸಿ, ಅಗತ್ಯ ಕ್ರಮವಹಿಸಲಾಗುವುದು’ ಎಂದು ತಿಳಿಸಿದ್ದಾರೆ.

ಮಟ್ಕಾ ಜೂಜಾಟ; ಐವರ ವಿರುದ್ಧ ಪ್ರಕರಣ

ಕಲಬುರಗಿ: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ವಿವಿಧೆಡೆ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳಾದ ಅಂಕುಶ ರಾಠೋಡ, ವಸಂತಕುಮಾರ ಅಲಿಯಾಸ್ ಬಬ್ಬರ್ ರಾಠೋಡ, ಕಾಶಿನಾಥ ರೋಡೆ, ವೆಂಕಟರಾವ ರೋಡೆ ಹಾಗೂ ಖಂಡೇರಾಯ ಕಣಮಸ್ ಅವರಿಂದ ಒಟ್ಟು ₹ 4,790 ನಗದು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಫರಹತಾಬಾದ್ ಠಾಣೆಯಲ್ಲಿ ಮೂರು ಹಾಗೂ ಅಶೋಕ ನಗರ ಠಾಣೆಯಲ್ಲಿ ಒಂದು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಬೈಕ್ ಕಳವು

ವ್ಯಕ್ತಿಯೊಬ್ಬರು ಊಟ ಮಾಡಿ ಬರುವಷ್ಟರಲ್ಲಿ ಹುಮನಾಬಾದ್‌ ರಿಂಗ್‌ ರಸ್ತೆ ಸಮೀಪದ ಹೋಟೆಲ್‌ ಎದುರು ನಿಲ್ಲಿಸಿದ್ದ ಬೈಕ್‌ ಅನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಲ್ತಾನಪುರ ಗ್ರಾಮದ ನಿವಾಸಿ ಧೂಳಪ್ಪ ಬಿರಾದಾರ ಬೈಕ್‌ ಕಳೆದುಕೊಂಡವರು. ಈ ಸಂಬಂಧ ಸಬರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಆರೋಪ; ಪ್ರಕರಣ ದಾಖಲು

ತಡರಾತ್ರಿ ಮದ್ಯ ತರಲು ಬೈಕ್‌ ಕೊಡದಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಕೇದಾರನಾಥನಿಂದ ಬರುತ್ತಿದ್ದ ಗೆಳೆಯನನ್ನು ಕೂರಿಸಿಕೊಂಡು ರೈಲ್ವೆ ನಿಲ್ದಾಣದಿಂದ ಬಂಬೂಬಜಾರ್‌ ಕಡೆಗೆ ಹೋಗುತ್ತಿದ್ದೆ. ಬಂಬೂ ಬಜಾರ್‌ ಹಿಂದಿನ ಎಚ್‌.ಕೆ.ಶಾಲೆ ಹಿಂಭಾಗದ ಪ್ರದೇಶದಲ್ಲಿ ನನ್ನನ್ನು ತಡೆದು ಮದ್ಯ ತರಲು ಬೈಕ್ ಕೊಡುವಂತೆ ಕೇಳಿದ. ನಾನು ನಿರಾಕರಿಸಿದೆ. ಬಳಿಕ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಲಾಗಿದೆ’ ಎಂದು ಈಶ್ವರ ಹೆಗ್ಗ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಚೌಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.