ಸೇಡಂ: ತಾಲ್ಲೂಕಿನ ಕಾಗಿಣಾ ನದಿ ಪ್ರವಾಹ ಶನಿವಾರ ಹೆಚ್ಚಿದ್ದರಿಂದ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯೊಳಗೆ ಸುಮಾರು ಎಂಟು ಸೇತುವೆಗಳು ಜಲಾವೃತ್ತಗೊಂಡಿದ್ದವು.
ಜಿಲ್ಲಾ ಕೇಂದ್ರ ಕಲಬುರಗಿ ಸೇರಿದಂತೆ ತಾಲ್ಲೂಕು ಕೇಂದ್ರ ಚಿಂಚೋಳಿ, ಕಾಳಗಿ, ಚಿತ್ತಾಪುರ ಸಂಪರ್ಕ ಕಡಿತಗೊಂಡಿತ್ತು. ಲಾಹೋಡ್, ಯಡ್ಡಳ್ಳಿ, ಸಂಗಾವಿ(ಟಿ), ಸಟಪಟನಹಳ್ಳಿ, ಕಾಚೂರು, ಕುಕ್ಕುಂದಾ, ಸಂಗಾವಿ(ಎಂ) ಮತ್ತು ಮಳಖೇಡ (ಹಳೆ) ಸೇತುವೆ ಸಂಪೂರ್ಣ ಜಲಾವೃತ್ತಗೊಂಡಿದ್ದವು. ಮಳಖೇಡ ಸೇತುವೆ ಮುಳುಗಿದ್ದರಿಂದ ಜಿಲ್ಲಾ ಕೇಂದ್ರ ಸಂಪರ್ಕ ಕಡಿತಗೊಂಡಿತ್ತು. ಸಟಪಟನಹಳ್ಳಿ ಸೇತುವೆ ಮುಳುಗಿದ್ದರಿಂದ ಚಿಂಚೋಳಿ- ಕಾಳಗಿ ತಾಲ್ಲೂಕು ಕೇಂದ್ರಗಳ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ತಾಲ್ಲೂಕಿನ ಲಾಹೋಡ್, ಸಂಗಾವಿ(ಟಿ), ತೆಲ್ಕೂರ, ಹಾಬಾಳ, ಸೂರವಾರ, ಯಡ್ಡಳ್ಳಿ, ಸಟಪಟನಳ್ಳಿ, ಕಾಚೂರು, ಬಿಬ್ಬಳ್ಳಿ, ಯಡಗಾ, ಕುಕ್ಕುಂದಾ, ಸಂಗಾವಿ(ಎಂ), ಬೀರನಳ್ಳಿ, ಮಳಖೇಡ, ಸಮಖೇಡ ತಾಂಡಾ, ಮುಗನೂರು ಸೇರಿದಂತೆ ಸುಮಾರು 15ಕ್ಕೂ ಅಧಿಕ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಯಲ್ಲಿನ ದವಸ ಧಾನ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಿದರು. ಪಟ್ಟಣದ ಇನ್ಫೋಸಿಸ್ ಕಾಲೊನಿ, ವಿವೇಕಾನಂದ ಶಾಲೆ, ವೆಂಕಟೇಶನ ನಗರ, ಆಶ್ರಯ ಕಾಲೊನಿ, ಊಡಗಿ ರಸ್ತೆ ಸೇರಿದಂತೆ ವಿವಿಧ ಕಡೆ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನರು ಪರದಾಡಿದರು. ಸ್ಥಳಕ್ಕೆ ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ, ಮುಖ್ಯಾಧಿಕಾರಿ ಶರಣಯ್ಯಸ್ವಾಮಿ, ಶಿವಶರಣರೆಡ್ಡಿ ಪಾಟೀಲ ಭೇಟಿ ನೀಡಿದರು.
ಏಳು ಕಡೆ ಕಾಳಜಿ ಕೇಂದ್ರ: ತಾಲ್ಲೂಕಿನ ಮಳಖೇಡ, ತೆಲ್ಕೂರ, ಮೀನಹಾಬಾಳ, ಕಾಚೂರು, ಯಡಗಾ, ಹಾಬಾಳ(ಟಿ), ಮತ್ತು ಕುಕ್ಕುಂದಾ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಪ್ರತಿ ಕಾಳಜಿ ಕೇಂದ್ರಗಳಲ್ಲಿ ಉಪಹಾರ ಮತ್ತು ವಸತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಪ್ರವಾಹ ಉಂಟಾದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರ ತೆರೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ತಿಳಿಸಿದರು.
ಆಹಾರದ ಕಿಟ್ ವಿತರಣೆ: ತಾಲ್ಲೂಕಿನ ಕಾಗಿಣಾ ನದಿ ನೀರಿನ ಪ್ರವಾಹಕ್ಕೆ ಸಿಲುಕಿದ್ದ ಜನರಿಗೆ ಮಳಖೇಡದ ಅಲ್ಟ್ರಾಟೆಕ್ ಕಂಪನಿ ವತಿಯಿಂದ ಶನಿವಾರ ಆಹಾರದ ಪೊಟ್ಟಣಗಳನ್ನು ಸಂತ್ರಸ್ತರಿಗೆ ವಿತರಿಸಲಾಯಿತು ಎಂದು ಕಂಪನಿ ಸಿಎಸ್ಆರ್ ವಿಭಾಗದ ಮುಖ್ಯಸ್ಥ ಚೇತನ ವಾಗ್ಮೋರೆ ಪ್ರಜಾವಾಣಿಗೆ ಮಾಹಿತಿ ನೀಡಿದರು. ಈ ಹಿಂದೆ ಮೂರು ದಿನಗಳ ಕಾಲವು ವಿತರಿಸಲಾಗಿತ್ತು.
ನೂತನ ಸೇತುವೆ ನಿರ್ಮಾಣಗೊಂಡರೂ ರಾಜ್ಯಹೆದ್ದಾರಿ ಬಂದ್!
ತಾಲ್ಲೂಕಿನ ಮಳಖೇಡ ಸೇತುವೆ ಈಚೆಗೆ ಉದ್ಘಾಟನೆಗೊಂಡಿದೆ. ಆದರೆ ಹಳೆ ಸೇತುವೆ ಮುಳುಗಿ ನೂತನ ಸೇತುವೆಗೆ ನೀರು ತಾಕಿ ಹರಿಯಿತು. ಸೇತುವೆ ಪಕ್ಕದ ಕಡೆಯಿಂದ ಕೂಡು ರಸ್ತೆ ಮೇಲೆ ನದಿ ನೀರು ಹರಿಯಿತು. ಇದರಿಂದ ರಾಜ್ಯಹೆದ್ದಾರಿ-10 ಕಲಬುರ್ಗಿ-ಸೇಡಂ ಸಂಪರ್ಕ ಮಧ್ಯಾಹ್ನದಿಂದ ಸ್ಥಗಿತಗೊಂಡಿತು. ಇದರಿಂದಾಗಿ ಜಿಲ್ಲಾ ಕೇಂದ್ರಕ್ಕೆ ತೆರಳುವ ಪ್ರಯಾಣಿಕರು ಪರದಾಡಿದರು.
ಶಾಲೆ ಜಲಾವೃತ:
ತಾಲ್ಲೂಕಿನ ಮಳಖೇಡ ಗ್ರಾಮದ ಕೋಲಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಗಿಣಾ ನದಿ ನೀರು ನುಗ್ಗಿದ್ದು ಜಲಾವೃತ್ತಗೊಂಡಿದೆ. ಶಾಲೆಯ ಒಳಗಡೆ ಕಾಗದ ಪತ್ರಗಳು ಒದ್ದೆಯಾಗಿವೆ. ಪಕ್ಕದಲ್ಲಿಯೇ ಇರುವ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿದ್ದು ಆಹಾರ ಸಾಮಾಗ್ರಿಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಮಲ್ಕಾಪಲ್ಲಿ ಗ್ರಾಮದಿಂದ ಸೋನಾರ್ ತಾಂಡಾಕ್ಕೆ ಹೋಗುವ ಡಾಂಬರ್ ರಸ್ತೆ ಮಳೆ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.