ಕಲಬುರಗಿ: ಹಲವರು ನಕಲಿ, ಮಾರ್ಪಡಿಸಿದ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನಗರದ ಜಗತ್ ವೃತ್ತದ ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ 13 ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
‘2024ರ ಜನವರಿ 2ರಿಂದ ಈತನಕ 13 ಮಂದಿ ಆನ್‌ಲೈನ್ ಮೂಲಕ ಸ್ಯಾಲರಿ ಸ್ಲಿಪ್ ಸೇರಿದಂತೆ ವಿವಿಧ ನಕಲಿ, ಮಾರ್ಪಡಿಸಿದ ದಾಖಲೆ ನೀಡಿ, ₹ 1.85 ಕೋಟಿ ವೈಯಕ್ತಿಕ ಸಾಲ ಪಡೆದಿದ್ದಾರೆ. ನಂತರ ಅವರು ಸಾಲ ಮರುಪಾವತಿಸದ ಕಾರಣ ಬ್ಯಾಂಕ್ ಅಧಿಕಾರಿಗಳು ಸಾಲ ಪಡೆದವರ ಕೆಲಸದ ಸ್ಥಳ, ವಾಸಸ್ಥಳದಲ್ಲಿ ಪರಿಶೀಲಿಸಿದಾಗ ಮೋಸ ಪತ್ತೆಯಾಗಿದೆ. ನಕಲಿ, ಮಾರ್ಪಡಿಸಿದ ದಾಖಲೆ ನೀಡಿ ಬ್ಯಾಂಕ್‌ಗೆ ₹ 1.31 ಕೋಟಿ ವಂಚಿಸಿ ಮೋಸ ಮಾಡಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಬೀದರ್‌ನ ಶ್ರೀಕೃಷ್ಣ, ಬೀದರ್ ಜಿಲ್ಲೆಯ ಖಟಕಚಿಂಚೋಳಿಯ ಆಕಾಶ, ಬೀದರ್‌ನ ಚಿಮಕೋಡ ನಿವಾಸಿ ವಿಶ್ವನಾಥ, ಆಳಂದ ತಾಲ್ಲೂಕಿನ ಗೋಳಾ (ಬಿ) ಗ್ರಾಮದ ಮತಾಬ್‌ಮಹಿಬೂಬ್, ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ದೌಲಪ್ಪ, ಭಾಲ್ಕಿ ತಾಲ್ಲೂಕಿನ ಸಿದ್ದೇಶ್ವರದ ಆನಂದ, ಚಿಮಕೋಡನ ಆನಂದ ದಿಂಪೆ, ಕಲಬುರಗಿಯ ಕಪನೂರು ಪ್ರದೇಶದ ಮಂಜುನಾಥ ಡೋಣಿ, ಕಲಬುರಗಿಯ ಕೋಡ್ಲಿ ಕ್ರಾಸ್ ಪ್ರದೇಶದ ಬಂದೇನವಾಜ್, ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಸಂದೀಪ ಬೊಕ್ಕೆ, ಬೀದರ್ ಜಿಲ್ಲೆಯ ನಾವಡಗೇರಿಯ ಅಮರ, ಬೀದರ್ ಜಿಲ್ಲೆಯ ಬಸವಕಲ್ಯಾಣದ ಶ್ರೀಕಾಂತ ಹಾಗೂ ಬೀದರ್ ಜಿಲ್ಲೆಯ ಕೋಡಂಬಲ್‌ನ ಸುನೀಲ್ ವಿರುದ್ಧ ಕಲಬುರಗಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.